ಹೊಸಪೇಟೆ: ಬಿಸಿಎಂ ಹಾಸ್ಟೆಲ್ ಗಳಲ್ಲಿ ಶೇಕಡ 25 ರಷ್ಟು ಹೆಚ್ಚುವರಿ ಸ್ಥಾನ ಕಲ್ಪಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಹರಪನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಸಿಎಂ ಹಾಸ್ಟೆಲ್ ಗಳಲ್ಲಿ ಹೆಚ್ಚುವರಿ ಶೇಕಡ 25ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುವ ಬಗ್ಗೆ ಎರಡು ದಿನದಲ್ಲಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
1.25 ಲಕ್ಷ ವಿದ್ಯಾರ್ಥಿಗಳು ವಿದ್ಯಾಸಿರಿ ಯೋಜನೆಯ ಅನುಕೂಲ ಪಡೆಯುತ್ತಿದ್ದು, ಅವರಲ್ಲಿ ಸ್ಥಳಾವಕಾಶ ಲಭ್ಯವಿರುವ ಕಡೆಗೆ 21 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಿಗೆ ಪ್ರವೇಶ ನೀಡಲಾಗುವುದು ಎಂದರು.
ಬೆಳಗಾವಿ, ಧಾರವಾಡ, ಶಿವಮೊಗ್ಗ, ಮೈಸೂರು ಮತ್ತು ಕಲಬುರ್ಗಿಯಲ್ಲಿ ತಲಾ ಒಂದು ಸಾವಿರ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸುವ ವಿದ್ಯಾರ್ಥಿ ನಿಲಯಗಳನ್ನು ದೀನದಯಾಳ್ ಉಪಾಧ್ಯಾಯರ ಹೆಸರಿನಲ್ಲಿ ಆರಂಭಿಸಲಾಗುವುದು. ಡಾ.ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ 100 ಹಾಸ್ಟೆಲ್, ಕನಕದಾಸರ ಹೆಸರಿನಲ್ಲಿ 50 ಹಾಸ್ಟೆಲ್ ಆರಂಭಿಸಲಾಗುವುದು ಎಂದರು.