ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ಸಲುವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದರೆ ಉಳಿದುಕೊಳ್ಳಲು ಅಗತ್ಯವಾದ ವ್ಯವಸ್ಥೆ ಇರಲಿಲ್ಲ. ಈ ನಿಟ್ಟಿನಲ್ಲಿ ಹಾಸ್ಟೆಲ್ ನಿರ್ಮಿಸಲು ತೀರ್ಮಾನಿಸಲಾಗಿದೆ.
ಕಳೆದ ತಿಂಗಳು ಸಚಿವ ನಾರಾಯಣಗೌಡ ಇದಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಸಂಪುಟದಲ್ಲಿ ವಿಷಯ ಮಂಡಿಸುವ ಭರವಸೆ ನೀಡಿದ್ದು, ಹೆಚ್.ಎಸ್.ಆರ್. ಸೆಕ್ಟರ್ 6 ರ ಸರ್ವೇ ನಂಬರ್ 30 ರ ರೂಪೇನ ಅಗ್ರಹಾರ ಪ್ರದೇಶದಲ್ಲಿ 59 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಿಸಲಾಗುವುದು.
ನಾಲ್ಕು ಮಹಡಿಯ ಕಟ್ಟಡದಲ್ಲಿ 400 ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಇರುತ್ತದೆ. ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ ನಿರ್ಮಿಸಲಾಗುವುದು. ಅಡುಗೆ ಮನೆ ವ್ಯವಸ್ಥೆ, ಸಭಾಂಗಣ, ಗ್ರಂಥಾಲಯ ಜಿಮ್, ಕ್ಲಾಸ್ ರೂಮ್, 74 ಕೊಠಡಿಗಳನ್ನು ನಿರ್ಮಿಸಲಾಗುವುದು. ಯುಪಿಎಸ್ಸಿ, ಕೆಪಿಎಸ್ಸಿ, ಕೌಶಲ್ಯ ಅಭಿವೃದ್ಧಿ ಸೇರಿದಂತೆ ವಿವಿಧ ತರಬೇತಿಗಳಿಗಾಗಿ ಕಲ್ಯಾಣ ಕರ್ನಾಟಕ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.