ಕೋವಿಡ್ 19ನಿಂದ ಮೃತರಾದ ಶವಗಳ ರಾಶಿಯನ್ನ ಕೋಣೆಯಲ್ಲಿ ಇಡಲಾದ ಆಘಾತಕಾರಿ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಥೇನಿ ಕೆ ವಿಲಕ್ಕು ಸರ್ಕಾರಿ ಆಸ್ಪತ್ರೆಯ ದೃಶ್ಯಗಳು ಇದಾಗಿದ್ದು ಮೃತರ ಸಂಬಂಧಿಕರಿಗೆ ಈ ಹೆಣದ ರಾಶಿಯಿರುವ ಶವಾಗಾರಕ್ಕೆ ಹೋಗಿ ನಿಮ್ಮವರ ಶವವನ್ನ ನೀವೇ ಹುಡುಕಿ ಎಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರಂತೆ.
ಆಸ್ಪತ್ರೆ ಸಿಬ್ಬಂದಿ ನಮ್ಮ ಬಳಿ ನಿಮ್ಮವರ ಶವವನ್ನ ಶವಾಗಾರಕ್ಕೆ ತೆರಳಿ ನೀವೇ ಹುಡುಕಿಕೊಳ್ಳಿ ಎಂದು ಹೇಳುತ್ತಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಥೇಣಿಯ 47 ವರ್ಷದ ವ್ಯಕ್ತಿ ಕೊರೊನಾದಿಂದ ಮೃತರಾದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಆಸ್ಪತ್ರೆ ಸಿಬ್ಬಂದಿ ಮೃತ ಸೋಂಕಿತನ ಕುಟುಂಬಸ್ಥರಿಗೆ ಶವಾಗಾರಕ್ಕೆ ಹೋಗಿ ಶವ ಹುಡುಕಿಕೊಳ್ಳಿ ಎಂದು ಹೇಳಿದ್ದಾರಂತೆ.
ಶವಾಗಾರಕ್ಕೆ ಹೋಗಿ ರಾಶಿ ರಾಶಿ ಶವಗಳನ್ನ ನೋಡಿದ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಪ್ರತಿಯೊಂದು ಶವಗಳನ್ನ ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್ನಲ್ಲಿ ಪ್ಯಾಕ್ ಮಾಡಿಡಲಾಗಿತ್ತು. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
ಈ ವಿಚಾರ ಎಲ್ಲೆಡೆ ವೈರಲ್ ಆದ ಬಳಿಕ ಮಾತನಾಡಿದ ಸರ್ಕಾರಿ ಆಸ್ಪತ್ರೆ ಡೀನ್ ಬಾಲಾಜಿನಾಥನ್ ಶವಾಗಾರ ತುಂಬಾನೇ ಚಿಕ್ಕದಾಗಿರೋದ್ರಿಂದ ಈ ರೀತಿ ಶವವನ್ನ ಸಂಗ್ರಹಿಸಿ ಇಡಲಾಗಿದೆ ಎಂದು ಸಬೂಬು ನೀಡಿದ್ರು.