ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೌರಸ್ವಾಸ್ಥ್ಯ ಯೋಜನೆ ರೂಪಿಸಿದ್ದು, ಇಂದು ಅಧಿಕೃತ ಚಾಲನೆ ನೀಡಲಾಗುವುದು.
ರಾಜ್ಯದಾದ್ಯಂತ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯ ಬಲ ನೀಡಲು ಈ ಯೋಜನೆ ರೂಪಿಸಲಾಗಿದೆ/ 2026ರ ವೇಳೆಗೆ ಎಲ್ಲ ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಯುಷ್ಮಾನ್ ಆರೋಗ್ಯ ಮಂದಿರಗಳು ಸೇರಿದಂತೆ ಒಟ್ಟು 5 ಸಾವಿರ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿ ಅಳವಡಿಸಲಾಗುವುದು.
ನವೆಂಬರ್ 21ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ.
ದೇಶದಲ್ಲಿಯೇ ಮೊದಲ ಬಾರಿಗೆ ಸೋಲಾರ್ ವ್ಯವಸ್ಥೆಯನ್ನು ರಿಮೋಟ್ ಮಾನಿಟರಿಂಗ್ ಸಿಸ್ಟಂ ಮೂಲಕ ನಿರಂತರ ನಿಗಾವಣೆ ಹಾಗೂ ಸೌರ ಇ- ಮಿತ್ರ ಮೊಬೈಲ್ ಆ್ಯಪ್ ಮೂಲಕ ಸೋಲಾರ್ ಸಾಧನಗಳ ನಿರ್ವಹಣೆ ಮಾಡಲಾಗುವುದು.
ರಾಜ್ಯಾದ್ಯಂತ 5,000 ಆರೋಗ್ಯ ಸಂಸ್ಥೆಗಳಿಗೆ 120 ಕೋಟಿ ರೂಪಾಯಿ ವೆಚ್ಚದಲ್ಲಿ ಸೋಲಾರ್ ಸೌಲಭ್ಯ ಅಳವಡಿಸಲಾಗುವುದು. ತಾಲೂಕು ಆಸ್ಪತ್ರೆಗೆ 10 ಕಿಲೋವ್ಯಾಟ್ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. 2026ರ ವೇಳೆಗೆ ರಾಜ್ಯದ ಎಲ್ಲಾ ಸಾರ್ವಜನಿಕ ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆಯುಷ್ಮಾನ್ ಮಂದಿರಗಳಿಗೆ ಸೋಲಾರ್ ಸೌಲಭ್ಯ ಕಲ್ಪಿಸಲಾಗುತ್ತದೆ. ಆಯುಷ್ಮಾನ್ ಆರೋಗ್ಯ ಮಂದಿರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 24 ಗಂಟೆಯೂ ವಿದ್ಯುತ್ ಪೂರೈಕೆಗಾಗಿ ಬ್ಯಾಟರಿ ಆಧಾರಿತ ಸೋಲಾರ್ ವ್ಯವಸ್ಥೆ ಇರಲಿದೆ.
ಸೋಲಾರ್ ಸೌರಶಕ್ತಿಯ ಬಳಕೆಯಿಂದ ಉತ್ತಮ ಆರೋಗ್ಯದ ಜೊತೆಗೆ ಪರಿಸರ ಸಂರಕ್ಷಣೆ ಮಾಡಲಾಗುವುದು. ಈಗಾಗಲೇ ರಾಯಚೂರು ಜಿಲ್ಲೆಯ ಎಲ್ಲಾ ಹಂತದ 257, ಉಡುಪಿ ಜಿಲ್ಲೆ ಮತ್ತು ಉತ್ತರ ಕರ್ನಾಟಕದ 14 ಜಿಲ್ಲೆಯ ಎಲ್ಲಾ 720 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಲಾರ್ ಅಳವಡಿಕೆ ಪೂರ್ಣಗೊಳಿಸಲಾಗಿದೆ.