ಧಾರವಾಡ: ವೈದ್ಯಕೀಯ ಸೇವಾ ನ್ಯೂನತೆ ಎಸಗಿದ್ದಕ್ಕೆ ಪರಿಹಾರ ಕೊಡಲು ಆಸ್ಪತ್ರೆಗೆ ಕಾಯಂ ಜನತಾ ನ್ಯಾಯಾಲಯದ ಆದೇಶಿಸಿದೆ.
ಚಂದ್ರಕಾಂತ ಬಿ. ಮಟ್ಟಿ ಹಾಗೂ ಕವಿತಾ ಚಂದ್ರಕಾಂತ ಮಟ್ಟಿ ಇವರು ಗದಗದ ಮಹಾತ್ಮ ಗಾಂಧಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆ್ಯಂಡ್ ರಿಸರ್ಚ್ ಸೆಂಟರ್ ನಲ್ಲಿ ತಮ್ಮ ಮಗ ಪ್ರಾಂಜಲ ಹಾಗೂ ಮಗಳು ವಚನ ಅವರನ್ನು ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಿಸಿದ್ದರು.
ಆದರೆ ಆಸ್ಪತ್ರೆಯವರು ಪ್ರಾಂಜಲನಿಗೆ ಪ್ರಥಮ ಹಂತದಲ್ಲಿಯೇ ಸರಿಯಾದ ಚಿಕಿತ್ಸೆ ಕೊಡದೇ ಇದ್ದುದರಿಂದ ಮತ್ತು ಸರಿಯಾಗಿ ಆರೈಕೆ ಮಾಡದೆ ನಿರ್ಲಕ್ಷ ತೋರಿದ್ದರಿಂದ ಹಾಗೂ ಬೇರೆ ಆಸ್ಪತ್ರೆಗೆ ಕಳುಹಿಸುವ ಪ್ರಕ್ರಿಯೆಯಲ್ಲಿ ಸರಿಯಾದ ಕ್ರಮ ಕೈಗೊಳ್ಳದೆ ಇದ್ದುದರಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಆಸ್ಪತ್ರೆಯವರು ಸೇವಾ ನ್ಯೂನ್ಯತೆ ಎಸಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಮತ್ತು ಪರಿಹಾರ ಕೋರಿ ಧಾರವಾಡದ ಕಾಯಂ ಜನತಾ ನ್ಯಾಯಾಲಯಕ್ಕೆ ಚಂದ್ರಕಾಂತ ಬಿ. ಮಟ್ಟಿ ಹಾಗೂ ಕವಿತಾ ಚಂದ್ರಕಾಂತ ಮಟ್ಟಿ ಅರ್ಜಿಯನ್ನು ಸಲ್ಲಿಸಿದ್ದರು.
ಸದರಿ ಅರ್ಜಿ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಖಾಯಂ ಜನತಾ ನ್ಯಾಯಾಲಯದ ಪ್ರಭಾರ ಅಧ್ಯಕ್ಷ ಎನ್. ಸುಬ್ರಮಣ್ಯ, ಸದಸ್ಯರಾದ ಗೀತಾ ಎಂ. ಯಾದಪ್ಪನವರ ಹಾಗೂ ವಿಜಯಲಕ್ಷ್ಮೀ ಎಂ. ಇವರು ಅರ್ಜಿದಾರರ ಮತ್ತು ಎದರುದಾರರ ವಾದವನ್ನು ಆಲಿಸಿದ್ದಾರೆ.
ಎದರುದಾರ ವೈದ್ಯಕೀಯ ಸಂಸ್ಥೆಯು ಅರ್ಜಿದಾರರ ಮಗನಿಗೆ ಸರಿಯಾದ ಹಾಗೂ ಸೂಕ್ತ ಚಿಕಿತ್ಸೆಯನ್ನು ತುರ್ತು ಸಮಯದಲ್ಲಿ ಸ್ವತಃ ಮಕ್ಕಳ ತಜ್ಞರು ನೀಡದೆ ಇದ್ದುದರಿಂದ ಕರ್ತವ್ಯ ನಿರತ ವೈದ್ಯರು ಚಿಕಿತ್ಸೆ ನೀಡಿದ್ದರೂ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೇ ಮತ್ತು ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ವ್ಯವಸ್ಥೆ ಮಾಡದೇ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.
ಈ ಆದೇಶ ನೀಡಿದ 2 ತಿಂಗಳ ಒಳಗಾಗಿ ಎದುರುದಾರರು 10,00,000 ರೂ. ಪರಿಹಾರನ್ನು ಶೇ.6 ಬಡ್ಡಿಯಂತೆ ಅರ್ಜಿಯ ದಿನಾಂಕದಿಂದ ಪಾವತಿಸಬೇಕೆಂದು ನಿರ್ದೇಶನ ನೀಡಿದೆ.