ರಾಯಚೂರು: ಕರ್ತವ್ಯ ನಿರತ ವೈದ್ಯರು, ಸಿಬ್ಬಂದಿ ಸ್ಥಳದಲ್ಲಿ ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ರಾಯಚೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕು ಆಸ್ಪತ್ರೆಗಳಲ್ಲಿ ನಿಯೋಜಿತ ವೈದ್ಯರು ಮತ್ತು ಸಿಬ್ಬಂದಿ ಸ್ಥಳದಲ್ಲಿ ಇದ್ದು, ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ನಿರ್ಲಕ್ಷ ವಹಿಸಿದ್ದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತಾಯಿ ಮತ್ತು ಮಗುವಿನ ಆರೋಗ್ಯ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇನ್ನು ಹೆಚ್ಚಿನ ಚಿಕಿತ್ಸೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ಮಾತೃತ್ವ ಸುರಕ್ಷಾ ಅಭಿಯಾನ ಜಾರಿಗೊಳಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಮಾತೃತ್ವ ಸುರಕ್ಷಾ ಅಭಿಯಾನ ನಡೆಸಲಾಗುವುದು. ಆಸ್ಪತ್ರೆಗಳಿಗೆ ಮೂಲಸೌಕರ್ಯ ವೈದ್ಯರು ಸಿಬ್ಬಂದಿ ನೇಮಕ ಮಾಡುವ ಮೂಲಕ ಸೌಲಭ್ಯ ಕಲ್ಪಿಸಲಾಗುವುದು. ತಾಲೂಕು ಆಸ್ಪತ್ರೆಗಳನ್ನು ಮಿನಿ ಆಸ್ಪತ್ರೆಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.