
ಚಿತ್ರದುರ್ಗ: ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಂಡು ಸಹಾಯಧನ ಪಡೆಯಲು ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ವರ್ಗದವರಿಗೂ ಶೇಕಡಾ 90 ರಷ್ಟು ಸಹಾಯಧನ ಪಾವತಿಸಲಾಗುವುದು. ಅರ್ಜಿಗಳನ್ನು ಜಿಲ್ಲೆಯ ಎಲ್ಲಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳಲ್ಲಿ ಸಲ್ಲಿಸಬಹುದಾಗಿರುತ್ತದೆ.
ಎಲ್ಲಾ ತರಕಾರಿ, ಹೂವಿನ ಬೆಳೆಗೆ ಗರಿಷ್ಟ 5 ಎಕರೆವರೆಗೂ ಶೇಕಡಾ 90 ರಷ್ಟು ಸಹಾಯಧನ ನೀಡಲಾಗುವುದು. ಬಾಳೆ, ಪಪ್ಪಾಯ, ಮಾವು, ಸಪೋಟ, ನಿಂಬೆ, ಸೀಬೆ, ತೆಂಗು ಇತ್ಯಾದಿ ತೋಟಗಾರಿಕೆ ಬೆಳೆಗಳಿಗೆ ಅಡಿಕೆ ಬೆಳೆ ಹೊರತುಪಡಿಸಿ ಗರಿಷ್ಟ 5 ಎಕರೆವರೆಗೆ ಶೇಕಡಾ 90 ರಷ್ಟು ಸಹಾಯಧನ ನೀಡಲಾಗುವುದು. 5 ಎಕರೆ ಮೇಲ್ಪಟ್ಟ ಗರಿಷ್ಟ 12.20 ಎಕರೆವರೆಗೆ ಶೇಕಡಾ 45 ರಷ್ಟು ಸಹಾಯಧನ ನೀಡಲಾಗುವುದು ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳು ಕೊಳವೆಬಾವಿ ಕೊರೆಸಿಕೊಂಡು ವಿದ್ಯುತ್ ಸಂಪರ್ಕ ಹೊಂದಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದಲ್ಲಿ ಸಹಾಯಧನ ನೀಡಲಾಗುವುದು ಎಂದು ಹೇಳಲಾಗಿದೆ.