ಟೆಕ್ಸಾಸ್‌ನಲ್ಲಿ 9 ವರ್ಷದ ಬಾಲಕನೊಬ್ಬ ಗುಂಡಿನ ದಾಳಿಯಿಂದ ಪಾರಾಗಿರುವ ವಿಡಿಯೋ ಎದೆನಡುಗಿಸುತ್ತೆ. ಹುಡುಗನೊಬ್ಬ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಕುಳಿತಿದ್ದು ಕಿಟಕಿಯ ಮೂಲಕ ತೂರಿ ಬಂದ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಈ ವೇಳೆ ಆತನೊಂದಿಗೆ ಮನೆಯಲ್ಲಿ ಸಾಕಿದ್ದ ನಾಯಿಗಳೂ ಸಹ ಭೀತಿಯಿಂದ ಓಡಿಹೋಗುತ್ತವೆ.
ರಾತ್ರಿ 7:30 ರ ಸುಮಾರಿಗೆ ಹುಡುಗ ತನ್ನ ಮನೆಯ ಕೋಣೆಯಲ್ಲಿರುವ ಸೋಫಾ ಮೇಲೆ ತನ್ನ ನಾಯಿಯೊಂದಿಗೆ ಕೂತಿರುತ್ತಾನೆ. ಕಿಟಕಿಯ ಮೂಲಕ ಗುಂಡಿನ ಸದ್ದು ಕೇಳಿದ್ದು ಧೂಳು ಮತ್ತು ಹೊಗೆ ಬರ್ತಿದ್ದಂತೆ ಸೋಫಾ ಮೇಲೆ ತಲೆ ಕೆಳಗಿಟ್ಟು ಕೆಲ ಕ್ಷಣ ರಕ್ಷಿಸಿಕೊಳ್ಳುತ್ತಾನೆ. ಬಳಿಕ ಗಾಬರಿಗೊಂಡು ಒಳಗೆ ಓಡುತ್ತಾನೆ. ಈ ವೇಳೆ ಅವನ ನಾಯಿಗಳು ಕೂಡ ಭಯಭೀತಗೊಂಡಂತೆ ಓಡಿಹೋಗುತ್ತವೆ.
“ಗುಂಡು ಗೋಡೆಯ ಮೂಲಕ ಬಂದಿತು. ಅದು ಕೇವಲ ಪಟಾಕಿ ಎಂದು ನಾನು ಭಾವಿಸಿದೆ, ಆದರೆ ಕಿರುಚಾಟವನ್ನು ಕೇಳಿದ ನಂತರ ನಾನು ಭಯಗೊಂಡು ಓಡಿಹೋದೆ” ಎಂದು ಬಾಲಕ ಹೇಳಿದ್ದಾನೆ.
ಮೇ 1 ರಂದು ಗುಂಡಿನ ದಾಳಿ ನಡೆದಿದ್ದು, ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದರು. ಫೋರ್ಟ್ ವರ್ತ್‌ನಲ್ಲಿರುವ ಮಿರಾಮರ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಈ ಘಟನೆ ನಡೆದಿದೆ. ಮೃತರು 3-19 ವಯಸ್ಸಿನವರು ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 817-392-4222 ನಲ್ಲಿ ಸಲಹೆಗಳನ್ನು ಹಂಚಿಕೊಳ್ಳಲು ಪೊಲೀಸರು ಸಾರ್ವಜನಿಕರನ್ನು ಮನವಿ ಮಾಡಿದ್ದಾರೆ.