
ಈಗ ವೈರಲ್ ಆಗಿರುವ ವಿಡಿಯೋದಲ್ಲಿನ ಘಟನೆ ಭಾರತದ ಯಾವ ರಾಜ್ಯದಲ್ಲಿ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಆದರೆ, ಸಾಮಾಜಿಕ ಜಾಲತಾಣ ‘ಎಕ್ಸ್’ ಬಳಕೆದಾರ ರವೀಂದರ್ ಕಪೂರ್ ಎಂಬವರು ಆಗಸ್ಟ್ 16ರಂದು ಈ ವಿಡಿಯೋವನ್ನು ಶೇರ್ ಮಾಡಿದ್ದು, ಸಹಸ್ರಾರು ವೀಕ್ಷಣೆಗಳನ್ನು ಗಳಿಸಿದೆ. ಈ ವೀಡಿಯೊ ವೀಕ್ಷಿಸಿದ ನೆಟ್ಟಿಗರು ಮಹಿಳೆಯರ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿರುವುದರ ಜೊತೆಗೆ ಇತರೆ ಮಹಿಳೆಯರು ಸಂತ್ರಸ್ತೆ ನೆರವಿಗೆ ಧಾವಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಕಂಡು ಬರುವಂತೆ ಓರ್ವ ಯುವತಿ ನಡೆದು ಹೋಗುತ್ತಿದ್ದಾಗ ಆಕೆಯ ಎದುರಿಗೆ ಬಂದ ಪುರುಷ, ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ತಳ್ಳಿದ್ದಾನೆ. ಬಳಿಕ ಸಹಜವಾಗಿ ನಡೆದುಕೊಂಡು ಹೋಗಲು ಮುಂದಾದ ವೇಳೆ ಆತ ಲೈಂಗಿಕ ಕಿರುಕುಳ ನೀಡಿದ್ದನ್ನು ನೋಡಿದ್ದ ಮಹಿಳೆಯರ ಒಂದು ಗುಂಪು ಕಲ್ಲು, ಕೋಲು ಹಿಡಿದು ಆತನನ್ನು ಥಳಿಸಿದೆ. ಮೊದಲಿಗೆ ಆತ ಪ್ರತಿರೋಧ ತೋರಿದರೂ ಸಹ ಮಹಿಳೆಯರ ಶಕ್ತಿ ಎದುರಿಗೆ ಮಣಿದು ಕೆಳಗೆ ಬಿದ್ದಿದ್ದಾನೆ. ಆದರೂ ಲೆಕ್ಕಿಸದೆ ಮಹಿಳೆಯರು ಆತನಿಗೆ ಚೆನ್ನಾಗಿ ತದುಕಿದ್ದಾರೆ.