ನವದೆಹಲಿ: ಸಶಸ್ತ್ರ ಪಡೆಗಳಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್ ಗೆ ಅರ್ಜಿ ಸಲ್ಲಿಸುವ ಅಗ್ನಿವೀರ್ ಗಳು ಎರಡು ಸಡಿಲಿಕೆಗಳನ್ನು ಪಡೆಯುತ್ತಾರೆ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ಮಾಜಿ ಅಗ್ನಿವೀರ್ ಗಳಿಗೆ ವಯೋಮಿತಿ ಮತ್ತು ದೈಹಿಕ ಪರೀಕ್ಷೆಯಲ್ಲಿ ವಿನಾಯಿತಿ ನೀಡಲಾಗುವುದು ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಾಹಿತಿ ಹಂಚಿಕೊಂಡಿದ್ದಾರೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್ ನಲ್ಲಿ ಕಾನ್ಸ್ ಟೇಬಲ್(ಜನರಲ್ ಡ್ಯೂಟಿ) /ರೈಫಲ್ ಮ್ಯಾನ್ ಹುದ್ದೆಗೆ ನೇಮಕಾತಿಯಲ್ಲಿ ಮಾಜಿ ಅಗ್ನಿವೀರ್‌ಗಳಿಗೆ 10% ಖಾಲಿ ಹುದ್ದೆಗಳ ಮೀಸಲಾತಿಗಾಗಿ ತಾತ್ವಿಕ ಅನುಮೋದನೆಯನ್ನು ನೀಡಲಾಗಿದೆ. ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಮತ್ತು ದೈಹಿಕ ದಕ್ಷತೆಯ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ರಕ್ಷಣಾ ಪಡೆಗಳಲ್ಲಿ ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಈ ವಿನಾಯಿತಿ ಸೌಲಭ್ಯ ಸಿಗಲಿದೆ ಎಂದು ಹೇಳಲಾಗಿದೆ.