ನವದೆಹಲಿ: 2024 ರ ವೇಳೆಗೆ ಪಿಒಕೆ ಭಾರತದ ಭಾಗವಾಗಲಿದೆ ಎಂದು ಭಾವಿಸುತ್ತೇವೆ ಎಂದು ಕೇಂದ್ರ ಸಚಿವ ಕಪಿಲ್ ಪಾಟೀಲ್ ಹೇಳಿದ್ದಾರೆ.
ಬಿಜೆಪಿ ಸಂಸದ ಹಾಗೂ ಕೇಂದ್ರ ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವ ಕಪಿಲ್ ಪಾಟೀಲ್, ಮಹಾರಾಷ್ಟ್ರದಲ್ಲಿ ಹೇಳಿಕೆ ನೀಡಿದ್ದು ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದೆ.
ಮುಂಬೈ ಸಮೀಪದ ಕಲ್ಯಾಣ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕಪಿಲ್ ಪಾಟೀಲ್, ನೋಡೋಣ ಮತ್ತು ಕಾಯೋಣ, ಬಹುಶಃ 2024 ರ ವೇಳೆಗೆ ಏನಾದರೂ ದೊಡ್ಡದು ಸಂಭವಿಸುತ್ತದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ಭಾರತದ ಭಾಗವಾಗಲಿದೆ ಎಂದು ನಿರೀಕ್ಷಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಮೋದಿಯಿಂದ ಮಾತ್ರ ಇವೆಲ್ಲಾ ಮಾಡಲು ಸಾಧ್ಯ, ಹಾಗಾಗಿ ಈರುಳ್ಳಿ, ಗೆಣಸು, ಸಿರಿಧಾನ್ಯಗಳ ಬೆಲೆಯಂತಹ ಸಣ್ಣಪುಟ್ಟ ವಿಚಾರಗಳ ಬಗ್ಗೆ ಯೋಚಿಸಬಾರದು ಎಂದು ಹೇಳಿದ್ದಾರೆ.
ದೇಶವಿಲ್ಲದಿದ್ದರೆ ಈರುಳ್ಳಿ, ಆಲೂಗಡ್ಡೆಯನ್ನು ಎಲ್ಲಿಂದ ಖರೀದಿಸಬೇಕು? ಮೊದಲು ದೇಶವನ್ನು ಉಳಿಸಬೇಕು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ದೇಶವನ್ನು ಉಳಿಸುವ ಕಾರ್ಯವನ್ನು ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಲು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹಗಲಿರುಳು ಹೇಗೆ ಶ್ರಮಿಸುತ್ತಿದ್ದಾರೆ ಎಂಬುದನ್ನು ರಾಜ್ಯ ಸಚಿವರು ವಿವರಿಸಿದರು.