ಭೋಪಾಲ್: ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣದಲ್ಲಿ ಪ್ರೇಮಿಗಳ ಕೊಂದ ಪೋಷಕರು ಮೊಸಳೆಗಳ ಬಾಯಿಗೆ ಶವ ಎಸೆದಿದ್ದಾರೆ.
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಬಾಲಕಿ ಮತ್ತು ಆಕೆಯ ಪ್ರಿಯಕರನನ್ನು ಆಕೆಯ ಪೋಷಕರು ಹತ್ಯೆ ಮಾಡಿದ್ದಾರೆ. ನಂತರ ಅವರ ದೇಹಗಳನ್ನು ಭಾರವಾದ ಕಲ್ಲುಗಳಿಂದ ಕಟ್ಟಿ ಭಾರಿ ಗಾತ್ರದ ಮೊಸಳೆಗಳಿರುವ ಚಂಬಲ್ ನದಿಯಲ್ಲಿ ಎಸೆಯಲಾಗಿದೆ.
ಆರೋಪಿ ಕುಟುಂಬ ಗುರುತಿಸಿರುವ ಸ್ಥಳಗಳಲ್ಲಿ ಡೈವರ್‌ಗಳ ಸಹಾಯದಿಂದ ಅವರ ಮೃತದೇಹಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಮೊರೆನಾ ಎಸ್‌ಪಿ ಶೈಲೇಂದ್ರ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಮೊರೆನಾ ಜಿಲ್ಲೆಯ ಅಂಬಾಹ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯು ಎರಡು ವಾರಗಳ ಹಿಂದೆ ನಡೆದಿದ್ದು, ಕೆಲವು ಸಂಬಂಧಿಕರೊಂದಿಗೆ ಹುಡುಗಿಯ ಕುಟುಂಬದವರು ಯುವ ದಂಪತಿಗಳನ್ನು ಗುಂಡು ಹಾರಿಸಿ ಕೊಂದು ನದಿಯಲ್ಲಿ ಮುಳುಗಿಸಿ ಅವರ ದೇಹಗಳನ್ನು ವಿಲೇವಾರಿ ಮಾಡಿದ್ದಾರೆ.
ಈ ಅಪರಾಧವನ್ನು ಬಹಿರಂಗಪಡಿಸಿದ ನಂತರ ನದಿಯಲ್ಲಿ ಶವಗಳನ್ನು ಹುಡುಕಲು ಪೊಲೀಸರು ರಾಜ್ಯ ವಿಪತ್ತು ನಿರ್ವಹಣಾ ಪಡೆ(SDRF) ತಂಡ ಮತ್ತು ಡೈವರ್‌ಗಳನ್ನು ನಿಯೋಜಿಸಿದ್ದಾರೆ. ರತನ್‌ಬಸಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ಶಿವಾನಿ ತೋಮರ್(18) ಪಕ್ಕದ ಗ್ರಾಮದ ಬಲುಪುರ ನಿವಾಸಿ ರಾಧೇಶ್ಯಾಮ್ ತೋಮರ್(21) ಎಂಬಾತನೊಂದಿಗೆ ಪ್ರಣಯ ಸಂಬಂಧ ಹೊಂದಿದ್ದರು. ಇವರ ಪ್ರೀತಿಗೆ ಜಾತಿ ಸಮಸ್ಯೆಗಳಿಂದ ಅವರ ಕುಟುಂಬದ ಆಕ್ಷೇಪಣೆ ಇತ್ತು.
ಜೂನ್ 3 ರಿಂದ, ಹುಡುಗ ಮತ್ತು ಹುಡುಗಿ ಇಬ್ಬರೂ ನಾಪತ್ತೆಯಾಗಿದ್ದರು, ರಾಧೇಶ್ಯಾಮ್ ತೋಮರ್ ಅವರ ಕುಟುಂಬವು ಹುಡುಗಿಯ ಕುಟುಂಬದವರು ಅವರನ್ನು ಕೊಲೆ ಮಾಡಿದ್ದಾರೆ ಎಂದು ಪದೇ ಪದೇ ಆರೋಪಿಸುತ್ತಿದ್ದರು. ಪೊಲೀಸರು ಬಾಲಕಿಯ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದರು.
ಶಿವಾನಿ ತಂದೆ ರಾಜಪಾಲ್ ಸಿಂಗ್ ತೋಮರ್ ಮತ್ತು ಹಲವಾರು ಮಹಿಳಾ ಸಹಚರರು ಜೂನ್ 3 ರಂದು ಶಿವಾನಿ ಮತ್ತು ರಾಧೇಶ್ಯಾಮ್ ತೋಮರ್ ಇಬ್ಬರನ್ನೂ ಗುಂಡಿಕ್ಕಿ ಕೊಂದು ನಂತರ ಕತ್ತಲೆಯಲ್ಲಿ ಚಂಬಲ್ ನದಿಯಲ್ಲಿ ಅವರ ಶವಗಳನ್ನು ವಿಲೇವಾರಿ ಮಾಡಿದ್ದಾರೆ ಎಂದು ಒಪ್ಪಿಕೊಂಡರು.
ಶವಗಳನ್ನು ನದಿಯಲ್ಲಿ ಎಸೆದು ಈಗ 15 ದಿನಗಳು ಕಳೆದಿವೆ, ಮೀನು ಮತ್ತು ಮೊಸಳೆಗಳಂತಹ ಜಲಚರಗಳ ಬೇಟೆಯ ಕಾರಣದಿಂದ ಅವಶೇಷ ಸಿಗುವುದು ಡೌಟ್ ಎನ್ನಲಾಗಿದೆ. ಕಳೆದ 10 ದಿನಗಳಿಂದ ರಾಧೇಶ್ಯಾಮ್ ತೋಮರ್ ಅವರ ಕುಟುಂಬದವರು ಅಂಬಾಹ್ ಪೊಲೀಸ್ ಠಾಣೆಯಿಂದ ಹಿಡಿದು ಪೊಲೀಸ್ ಸೂಪರಿಂಟೆಂಡೆಂಟ್(ಎಸ್‌ಪಿ) ಕಚೇರಿಯವರೆಗೆ ದೂರು ನೀಡಿ ಪತ್ತೆ ಮಾಡಲು ಒತ್ತಾಯಿಸಿದ್ದರು. ಕೊಲೆ ಮಾಡಿ ಶವಗಳನ್ನು ಮೊಸಳೆಗಳಿದ್ದ ನದಿಗೆ ಎಸೆದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.