ಹಾಂಗ್ ಕಾಂಗ್ ನಲ್ಲಿ ಖಾಲಿ ಅಪಾರ್ಟ್ ಮೆಂಟ್ ನಲ್ಲಿ ಕ್ಲೀನರ್ ಗೆ ಗಾಜಿನ ಬಾಟಲಿಗಳಲ್ಲಿ 2 ಮೃತ ಶಿಶುಗಳು ಕಂಡು ಬಂದಿದ್ದು, ನಂತರ ಹಾಂಗ್ ಕಾಂಗ್ ಪೊಲೀಸರು ಪುರುಷ ಮತ್ತು ಮಹಿಳೆಯನ್ನು ಬಂಧಿಸಿದ್ದಾರೆ.
ಹಾಂಗ್ ಕಾಂಗ್ ಬ್ರಾಡ್‌ಕಾಸ್ಟರ್ ಆರ್‌ಟಿಹೆಚ್‌ಕೆ ಪ್ರಕಟಿಸಿದ ವರದಿಯ ಪ್ರಕಾರ, ಬಾಡಿಗೆ ಫ್ಲಾಟ್ ನಲ್ಲಿ ಕ್ಲೀನರ್ ಗೆ ಗಾಜಿನ ಬಾಟಲಿಗಳಲ್ಲಿ ಎರಡು ಸತ್ತ ಶಿಶುಗಳು ಪತ್ತೆಯಾಗಿವೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎರಡು ಗಂಡು ಶಿಶುಗಳು ಹೇಗೆ ಸಾವನ್ನಪ್ಪಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ದೇಹಗಳನ್ನು ದ್ರವದಲ್ಲಿ ನೆನೆಸಿ ಲಿವಿಂಗ್ ರೂಮಿನ ಮೂಲೆಯಲ್ಲಿ ಇರಿಸಲಾದ ಬಾಟಲಿಗಳಲ್ಲಿ ಇರಿಸಲಾಗಿತ್ತು. ಶಿಶುಗಳ ವಯಸ್ಸನ್ನು ನಿರ್ಧರಿಸಲು ಶವಪರೀಕ್ಷೆಯನ್ನು ನಡೆಸಲಾಗುವುದು. ಅವು ಹುಟ್ಟುವಾಗಲೇ ಸತ್ತಿವೆಯೇ ಎಂದು ನಿರ್ಧರಿಸಲು ಪ್ರಯತ್ನಿಸಲಾಗುವುದು ಎಂದು ನ್ಯೂ ಟೆರಿಟರಿಸ್ ನಾರ್ತ್ ವಿಭಾಗದ ಮುಖ್ಯ ಇನ್ಸ್‌ಪೆಕ್ಟರ್ ಔ ಯೆಯುಂಗ್ ತಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಾಟಲಿಗಳು 30 ಸೆಂಟಿಮೀಟರ್‌ಗಳು(1 ಅಡಿ) ಎತ್ತರವಿದೆ ಮತ್ತು ದೇಹಗಳ ಮೇಲೆ ಗಾಯದ ಯಾವುದೇ ಸ್ಪಷ್ಟ ಲಕ್ಷಣಗಳನ್ನು ಹೊಂದಿಲ್ಲ. ಮೃತದೇಹಗಳನ್ನು ಅಕ್ರಮವಾಗಿ ವಿಲೇವಾರಿ ಮಾಡಿದ ಆರೋಪದ ಮೇಲೆ ಪೊಲೀಸರು 24 ವರ್ಷದ ಪುರುಷ ಮತ್ತು 22 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಅವರು ಮೃತ ಶಿಶುಗಳ ಪೋಷಕರು ಎಂದು ನಂಬಲಾಗಿದೆ.
ಬಾಡಿಗೆದಾರರು ಸ್ಥಳಾಂತರಗೊಂಡ ನಂತರ, ಮಾಲೀಕರು ಶುಕ್ರವಾರ ಅಪಾರ್ಟ್ ಮೆಂಟ್ ಗೆ ಸ್ವಚ್ಛಗೊಳಿಸುವ ವ್ಯಕ್ತಿಯನ್ನು ಕಳುಹಿಸಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ.