ಬೆಂಗಳೂರು: ವಿಚ್ಛೇದಿತರು, ಅವಿವಾಹಿತರು, ಯುವಕರನ್ನು ಗುರಿಯಾಗಿಸಿಕೊಂಡು ಅವರೊಂದಿಗೆ ದೈಹಿಕ ಸಂಬಂಧ ಬೆಳೆಸಿ ಹನಿಟ್ರ್ಯಾಪ್ ಮಾಡುತ್ತಿದ್ದ ಮಾಜಿ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮೂಲಕ ಅವಿವಾಹಿತರು ಮತ್ತು ವಿಚ್ಛೇದಿತರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಶಿಕ್ಷಕಿ ಅವರೊಂದಿಗೆ ದೈಹಿಕ ಸಂಬಂಧ ಬೆಳೆಸಿ ಖಾಸಗಿ ಕ್ಷಣದ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಳು. ಬಳಿಕ ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಸಿ ಹಣ ಪಡೆಯುತ್ತಿದ್ದಳು.
ಹೀಗೆ ಪ್ರೇಮ್ ಡ್ಯಾನಿಯಲ್ ಎಂಬುವನನ್ನು ಪರಿಚಯಿಸಿಕೊಂಡಿದ್ದ ಶಿಕ್ಷಕಿ ಆತನನ್ನು ಮನೆಗೆ ಕರೆಸಿಕೊಂಡು ದೈಹಿಕ ಸಂಬಂಧ ಬೆಳೆಸಿ ಚಿತ್ರೀಕರಣ ಮಾಡಿಕೊಂಡಿದ್ದಾಳೆ. ನಂತರ ಎರಡು ಲಕ್ಷ ರೂಪಾಯಿ ಹಣ ಕೊಡುವಂತೆ ಒತ್ತಾಯಿಸಿದ್ದು ಇದಕ್ಕೆ ನಿರಾಕರಿಸಿದಾಗ ಅತ್ಯಾಚಾರದ ಕೇಸು ದಾಖಲಿಸಿದ್ದಾಳೆ. ಇಂದಿರಾ ನಗರ ಠಾಣೆ ಪೊಲೀಸರು ಪ್ರೇಮ್ ನನ್ನು ಕರೆಸಿ ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.
ಬಳಿಕ ಶಿಕ್ಷಕಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಇದೇ ರೀತಿ ಅನೇಕರಿಗೆ ವಂಚಿಸಿರುವುದು ಗೊತ್ತಾಗಿದೆ. ಆಕೆಯ ಮೊಬೈಲ್ ಪರಿಶೀಲಿಸಿದಾಗ ಒಪ್ಪಿತ ಸಂಬಂಧ ಬೆಳೆಸಿರುವುದು ಕಂಡುಬಂದಿದೆ. ಚಿಕ್ಕಮಗಳೂರು ಜಿಲ್ಲೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರೋಪಿ ಮುಖ್ಯ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದು, ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಲಸಕ್ಕೆ ನಿರಂತರ ಗೈರುಹಾಜರಾಗಿ ವಜಾಗೊಂಡಿದ್ದ ಶಿಕ್ಷಕಿ ಮೂಲಕ ಅಮಾಯಕರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ಅನೇಕರ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸಿದ್ದಾಳೆ ಎಂದು ಹೇಳಲಾಗಿದೆ.