
ಬೆಂಗಳೂರು: ಪ್ರಭಾವಿ ಸಚಿವರೊಬ್ಬರ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂಬ ಚರ್ಚೆ ವಿಚಾರ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಪ್ರಭಾವಿ ಮಂತ್ರಿಯೊಬ್ಬರಿಗೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂಬ ಚರ್ಚೆ ರಾಜಕಿಯ ವಲಯದಲ್ಲಿ ಸುದ್ದಿಗೆ ಗ್ರಾಸವಾಗಿತ್ತು. ಇಂದು ಸಚಿವ ಸತೀಶ್ ಜಾರಕಿಹೊಳಿ ಕೂಡ ಸಚಿವರೊಬ್ಬರಿಗೆ ಎರಡು ಬಾರಿ ಹನಿಟ್ರ್ಯಾಪ್ ಮಾಡುವ ಷಡ್ಯಂತ್ರ ನಡೆದಿತ್ತು ಎಂಬುದನ್ನು ತಿಳಿಸಿದ್ದರು. ವಿಧಾನಸಭೆಯಲ್ಲಿ ಕಲಾಪದವೇಳೆ ಇದೇ ವಿಚಾರ ಚರ್ಚೆಗೆ ಬಂದಿದ್ದು, ಈ ವೇಳೆ ಶಾಸಕ ಯತ್ನಾಳ್ ತುಮಕೂರು ಮೂಲದ ಸಚಿವರಿಗೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎನ್ನಲಾಗಿದೆ ಎಂದಿದ್ದಾರೆ. ಈ ವೇಳೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಕೆಲ ಸ್ಪಷ್ಟೀಕರಣ ನೀಡಲು ಯತ್ನಿಸಿದರು. ತುಮಕೂರು ಭಾಗದಲ್ಲಿ ನಾನು ಹಾಗೂ ಗೃಹ ಸಚಿವ ಇಬ್ಬರೂ ಸಚಿವರಿದ್ದೇವೆ. ಅನಗತ್ಯ ಆರೋಪ ಮಾಡಲಾಗುತ್ತಿದೆ. ಈ ಬಗ್ಗೆ ನಾನು ಲಿಖಿತ ದೂರು ನೀಡುತ್ತೇನೆ ಇದರ ಹಿಂದೆ ಯಾರಿದ್ದಾರೆ ಎಂಬ ತನಿಖೆಯಾಗಲಿ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹನಿಟ್ರ್ಯಾಪ್ ಬಗ್ಗೆ ಲಿಖಿತ ದೂರು ನೀಡಿದರೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ಹನಿಟ್ರ್ಯಾಪ್ ಜಾಲದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗುವುದು. ಈ ಬಗ್ಗೆ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.