ಬೆಂಗಳೂರು: ಮದುವೆಗೆ ಹೆಣ್ಣು ತೋರಿಸುವುದಾಗಿ ಹೇಳಿ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ನ್ನು ಬೆಂಗಳೂರಿನ ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
ಗೀತಾ, ಮಂಜುಳಾ, ವಿಜಯಲಕ್ಷ್ಮೀ, ಲೀಲಾವತಿ, ಹರೀಶ್, ವೆಂಕಟೇಶ್ ಬಂಧಿತ ಆರೋಪಿಗಳು. ಕೆಲ ದಿನಗಳ ಹಿಂದೆ ಯುವಕನೊಬ್ಬನಿಗೆ ಪರಿಚಯವಾಗಿದ್ದ ಆರೋಪಿ ಮಂಜುಳಾ, ಮದುವೆಗೆ ಯುವಕನಿಗೆ ಮಧು ತೋರಿಸುವುದಾಗಿ ಹೇಳಿದ್ದಾಳೆ. ಮಂಜುಳಾ ಮಾತು ನಂಬಿ ಯುವಕ ಕರೆ ಮಾಡಿದಾಗ ಹೆಬ್ಬಾಳದ ತನ್ನ ಸ್ನೇಹಿತೆ ಮನೆಯಲ್ಲಿ ಕನ್ಯೆ ಇದ್ದಾಳೆ ಅಲ್ಲಿಗೆ ಹೋಗಬೇಕು ಎಂದಿದ್ದಾಳೆ.
ಅದರಂತೆ ಮಂಜುಳಾ ಸ್ನೇಹಿತೆ ವಿಜಯಲಕ್ಷ್ಮೀ ಮನೆಗೆ ಯುವಕ ಹೋಗಿದ್ದ. ಮನೆಯಲ್ಲಿದ್ದ ಲೀಲಾವತಿ ಎಂಬ ಯುವತಿಯನ್ನು ವಿಜಯಲಕ್ಷ್ಮೀ ಪರಿಚಯ ಮಾಡಿಕೊಟ್ಟಿದ್ದಳು. ಟೀ ಪುಡಿ ತರಬೇಕು ಹೋಗಿ ಬರುತ್ತೇನೆ ಎಂದು ವಿಜಯಲಕ್ಷ್ಮೀ ಮನೆಯಿಂದ ಹೊರಬಂದಿದ್ದಾಳೆ. ಮನೆಯಲ್ಲಿ ಯುವಕ ಹಾಗೂ ಲೀಲಾವತಿ ಇಬ್ಬರೇ ಇದ್ದಾಗ ಪೊಲೀಸರ ಸೋಗಿನಲ್ಲಿ ಗೀತಾ ಹಾಗೂ ಹರೀಶ್, ವೆಂಕಟೇಶ್ ಮನೆಗೆ ಬಂದಿದ್ದು, ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದೀರಾ ಎಂದು ಗದರಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿದ್ದಾರೆ. ಹೊರ ಬಿಡಬೇಕು ಎಂದರೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆರೋಪಿಗಳಿಗೆ ಯುವಕ ಫೋನ್ ಪೇ ಮೂಲಕ 50 ಸಾವಿರ ಹಣ ಕಳುಹಿಸಿದ್ದಾನೆ.
ಅಲ್ಲಿಂದ ತಪ್ಪಿಸಿಕೊಂಡು ಬಂದ ಯುವಕ ಮೋಸ ಹೋಗಿದ್ದು ಅರಿವಾಗಿ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ತನಿಖೆ ನಡೆಸಿದ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ.