ಬೆಂಗಳೂರು: ಹನಿಟ್ರ್ಯಾಪ್ ಮಾಡಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ತಂಡದ ಓರ್ವ ಆರೋಪಿಯನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಂಡದಲ್ಲಿದ್ದ ಇನ್ನೂ ಹಲವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಮೊಬೈಲ್ ರಿಪೇರಿ ಮಾಡಿ ಕೊಡುವ ನೆಪದಲ್ಲಿ ವ್ಯಕ್ತಿಯನ್ನು ಪರಿಚಯಿಸಿಕೊಂಡ ಮಹಿಳೆ ಸಹಚರರೊಂದಿಗೆ ಸೇರಿ ಇಬ್ಬರನ್ನು ಹನಿಟ್ರ್ಯಾಪ್ ಮಾಡಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಕಲಾಸಿಪಾಳ್ಯದ ಮೊಹಮ್ಮದ್ ಜಿಯಾಉಲ್ಲಾ ದೂರು ನೀಡಿದ್ದು, ಸಲ್ಮಾನ್ ಎಂಬುವವನನ್ನು ಬಂಧಿಸಲಾಗಿದೆ.
ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ ಮಹಿಳೆ ಮತ್ತು ಇತರೆ ಇಬ್ಬರು ಆರೋಪಿಗಳಿಗೆ ಹುಡುಕಾಟ ನಡೆದಿದೆ. ಜಿಯಾವುಲ್ಲಾ ಮೊಬೈಲ್ ಸರ್ವಿಸ್ ಅಂಗಡಿ ಇಟ್ಟುಕೊಂಡಿದ್ದ. ಪರಿಚಯದವರ ಮೂಲಕ ಆತನಿಂದ ಮೊಬೈಲ್ ರಿಪೇರಿ ಮಾಡಿಸಿಕೊಂಡಿದ್ದ ಮಹಿಳೆ, ಆತ ಮತ್ತು ಅವನ ಸಂಗಡಿಗರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾಳೆ.
ನವೆಂಬರ್ 23 ರಂದು ಸಹಚರರೊಂದಿಗೆ ಜಿಯಾವುಲ್ಲಾ ಮನೆಗೆ ಬಂದು ಬೆದರಿಸಿದ್ದಾಳೆ. ಅಲ್ಲಿಗೆ ಜಿಯಾವುಲ್ಲಾ ಸ್ನೇಹಿತ ಶರೀಫ್ ನನ್ನು ಕರೆಸಿಕೊಂಡು ಇಬ್ಬರಿಗೂ ಬೆದರಿಸಿ ಬಲವಂತವಾಗಿ ಮಹಿಳೆಯೊಂದಿಗೆ ಬೆತ್ತಲೆ ಕೂರಿಸಿ ಅಶ್ಲೀಲ ರೀತಿಯಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. 5 ಲಕ್ಷ ರೂ. ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುವುದಾಗಿ ಬೆದರಿಸಿದ್ದಲ್ಲದೇ, ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ. ಜಿಯಾವುಲ್ಲಾ ಬಳಿಯಿದ್ದ 25 ಸಾವಿರ ರೂ. ದೋಚಿದ್ದಾರೆ. ಜಿಯಾವುಲ್ಲಾ ಮತ್ತು ಶರೀಫ್ ಅವರ ಮೇಲೆ ಹಲ್ಲೆ ನಡೆಸಿ ಹಣ ಕೇಳಿದ್ದು, ಹಣ ಹೊಂದಿಸಲು ಸಮಯ ಕೊಡುವಂತೆ ಕೇಳಿದಾಗ ಬಿಟ್ಟು ಕಳುಹಿಸಿದ್ದಾರೆ. ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.