ಧಾರವಾಡ: ಅಮಾಯಕರ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಜಾಲವನ್ನು ಪತ್ತೆ ಮಾಡಿರುವ ಧಾರವಾಡದ ವಿದ್ಯಾಗಿರಿ ಠಾಣೆ ಪೋಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದ ಮಹಿಳೆಯರು ಸಂಪರ್ಕ ಸಾಧಿಸುತ್ತಿದ್ದರು. ಸಲುಗೆ ಬೆಳೆದ ನಂತರ ಭೇಟಿಯಾಗಲು ತಮ್ಮ ಬಳಿಗೆ ಕರೆಸಿಕೊಂಡು ಅವರೊಂದಿಗಿನ ಖಾಸಗಿ ಫೋಟೋ, ವಿಡಿಯೋ ಚಿತ್ರೀಕರಣ ಮಾಡಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದರು.
ಹುಬ್ಬಳ್ಳಿ -ದಾರವಾಡ ಕಮಿಷನರೇಟ್ ನ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮಹಾಲಿಂಗ ನಂದಗಾವಿ ಈ ಬಗ್ಗೆ ಮಾಹಿತಿ ನೀಡಿದ್ದು, ಧಾರವಾಡದ ಆಕಾಶ್ ಉಪ್ಪಾರ, ರೇಣುಕಾ ಉಪ್ಪಾರ, ಹುಬ್ಬಳ್ಳಿಯ ಮಲ್ಲಿಕಾ ಜಾನ್ ನದಾಫ್, ಗಜಲ್ ಬಾನು ಎಂಬುವರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ ನಾಲ್ಕು ವಿವಿಧ ಕಂಪನಿಯ ಮೊಬೈಲ್, ಒಂದು ಸ್ಕೋಡಾ ಕಾರು, 5.5 ಲಕ್ಷ ರೂಪಾಯಿ ನಗದು, 85 ಗ್ರಾಂ ಚಿನ್ನಾಭರಣ, ಒಂದು ಬೆಳ್ಳಿ ಕಡಗ ಸೇರಿ 14.73 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳು ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದ ರೈತರೊಬ್ಬರನ್ನು ಪರಿಚಯಿಸಿಕೊಂಡು ಧಾರವಾಡಕ್ಕೆ ಕರೆಸಿ ಖಾಸಗಿ ಕ್ಷಣಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅವರ ಫೋಟೋ ಬಹಿರಂಗಪಡಿಸುವುದಾಗಿ ಬೆದರಿಸಿ 50 ಲಕ್ಷ ರೂಪಾಯಿ ವಸೂಲಿ ಮಾಡಿದ್ದು, ಅದೇ ಹಣದಲ್ಲಿ ಕಾರು ಖರೀದಿಸಿದ್ದಾರೆ. ನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ರೈತ ಆತ್ಮಹತ್ಯೆಗೆ ನಿರ್ಧರಿಸಿದ್ದು, ಅವರ ಆತ್ಮೀಯ ಪೊಲೀಸ್ ಸಿಬ್ಬಂದಿಗೆ ಈ ವಿಷಯ ತಿಳಿಸಿದಾಗ ಅವರು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.