ಬೆಂಗಳೂರು: ಹನಿಟ್ರ್ಯಾಪ್ ಜಾಲಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ವಿಶೇಷ ಅಧಿಕಾರಿಯೊಬ್ಬರು ಸಿಲುಕಿಕೊಂಡು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮಾಜಿ ಮುಖ್ಯಮಂತ್ರಿಯೊಬ್ಬರ ವಿಶೇಷ ಕರ್ತವ್ಯದ ಅಧಿಕಾರಿ(OSD)ಯಾಗಿ ಸೇವೆ ಸಲ್ಲಿದ್ದವರು ಹನಿಟ್ರ್ಯಾಪ್ ಗೆ ಸಿಲುಕಿದ್ದು 6.8 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಲೇಶ್ವರಂ ನಿವಾಸಿಯಾಗಿರುವ 58 ವರ್ಷದ ಅಧಿಕಾರಿ ಜೂನ್ 12ರಂದು ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಅತಿಥಿಗೃಹದಲ್ಲಿ ವಾಸವಾಗಿದ್ದರು. ಸ್ನಾನ ಮುಗಿಸಿ ಹೊರ ಬಂದ ವ್ಯಕ್ತಿಗೆ ವಿಡಿಯೋ ಕಾಲ್ ಒಂದು ಬಂದಿದೆ. ಇದಕ್ಕೆ ಅಧಿಕಾರಿ ಉತ್ತರಿಸಿದ್ದಾರೆ. ಇದೇ ಕಾಲ್ ನ್ನು ರೆಕಾರ್ಡ್ ಮಾಡಿಕೊಂಡ ಮಹಿಳೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ. ಘಟನೆ ಮರುದಿನವೇ ಅಧಿಕಾರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ಆದರೆ ಅಧಿಕಾರಿ ಕರೆ ಸ್ವೀಕರಿಸಿಲ್ಲ. ಆದರೂ ಮತ್ತೆ ಮತ್ತೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ಮಹೇಂದ್ರ ಸಿಂಗ್ ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ವರದಿಗಾರ. ನಿಮ್ಮ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಮಹಿಳೆಯೊಂದಿಗೆ ವಿಡಿಯೋ ಕಾಲ್ ನಲ್ಲಿ ಅನುಚಿತವಾಗಿ ವರ್ತಿಸಿದ್ದೀರಿ. ಈ ವಿಡಿಯೋ ನಮಗೆ ಲಭ್ಯವಾಗಿದ್ದು, ಯೂಟ್ಯೂಬ್ ಹಾಗೂ ಫೇಸ್ ಬುಕ್ ನಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾನಂತೆ.
ಹೇಳಿದಷ್ಟು ಹಣ ಕೊಟ್ಟರೆ ವಿಡಿಯೋ ಡಿಲಿಟ್ ಮಾಡುವುದಾಗಿ ಹೇಳಿದ್ದಾನೆ. ಇದರಿಂದ ಬೆದರಿದ ಅಧಿಕಾರಿ ಹೇಳಿದಷ್ಟು ಹಣ ನೀಡಲು ಒಪ್ಪಿದ್ದಾರೆ. ಆರಂಭದಲ್ಲಿ 1.5 ಲಕ್ಷ ನಂತರ 50 ಸಾವಿರ ಹೀಗೆ ಆತನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಜು.14ರಂದು 2 ಪ್ರತ್ಯೇಕ ಖಾತೆಗೆ 2 ಲಕ್ಷ ಹಾಗೂ 2.8 ಲಕ್ಷ ಹಣ ವರ್ಗಾಯಿಸಿದ್ದಾರೆ. ಒಟ್ಟು 6.8 ಲಕ್ಷ ರೂಪಾಯಿ ಹಣವನ್ನು ವಂಚಕರು ದೋಚಿದ್ದಾರೆ. ಬಳಿಕ ಮತ್ತೆ ಕರೆ ಮಾಡಿರುವ ವಂಚಕರು 7.2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅಧಿಕಾರಿ ನಗರ ಪೊಲೀಸ್ ಕಮಿಷ್ನರ್ ಅವರಿಗೆ ವಿಷಯ ತಿಳಿಸಿ, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.