ಬೆಂಗಳೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣಗೆ ಹನಿಟ್ರ್ಯಾಪ್ ಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಾಜಣ್ಣ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಚಿವ ಕೆ.ಎನ್.ರಾಜಣ್ಣಗೆ ಹನಿಟ್ರ್ಯಾಪ್ ಯತ್ನ ಪ್ರಕರಣದ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿತ್ತು. ಈ ವೇಳೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ನಾನು ಹೇಳಿದ್ದೆವು. ಈಗ ಸಚಿವರು ಮನವಿ ಸಲ್ಲಿಸಿದ್ದಾರೆ ಈ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಅಧಿವೇಶನದಲ್ಲಿ ಹನಿಟ್ರ್ಯಾಪ್ ಪ್ರಕರಣ ಪ್ರಸ್ತಾಪದ ಬಳಿಕ ಸಚಿವ ರಾಜಣ್ಣ ಬ್ಯುಸಿಯಿದ್ದರು. ಈಗ ಬಂದು ಹನಿಟ್ರ್ಯಾಪ್ ಕೇಸ್ ಬಗ್ಗೆ ಮನವಿ ಮಾಡಿದ್ದಾರೆ. ನನಗೆ ದೂರು ಕೊಡಲು ಆಗಲ್ಲ, ಕೇವಲ ಮನವಿ ಮಾತ್ರ ಸಲ್ಲಿಸಿದ್ದಾರೆ. ಯಾವುದೇ ದೂರನ್ನು ಪೊಲೀಸರಿಗೆ ನೀಡಬೇಕು. ಸಿಎಂ ಕಾನೂನು ತಜ್ಞರ ಜೊತೆ ಚರ್ಚಿಸಿ ತನಿಖೆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.