ಈವೆಂಟ್ ಮ್ಯಾನೇಜರ್ ಅನ್ನು ಅಪಹರಿಸಿ ಮತ್ತು ಹಲ್ಲೆ ಮಾಡಿದ ಆರೋಪಗಳನ್ನು ರಾಪರ್ ಹನಿ ಸಿಂಗ್ ಅಲ್ಲಗಳೆದಿದ್ದಾರೆ. ತಮ್ಮ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು, “ಸುಳ್ಳು ಮತ್ತು ಆಧಾರರಹಿತ” ಎಂದು ಕರೆದಿದ್ದಾರೆ.
ಈವೆಂಟ್ ಕಂಪನಿಯೊಂದರ ಮಾಲೀಕ ವಿವೇಕ್ ರಾಮನ್ ಅವರು ಮುಂಬೈನ ಬಿಕೆಸಿ ಪೊಲೀಸ್ ಠಾಣೆಯಲ್ಲಿ ಹನಿ ಸಿಂಗ್ ಸೇರಿದಂತೆ ಇತರರ ವಿರುದ್ಧ ಅಪಹರಣ ಮತ್ತು ಹಲ್ಲೆ ಆರೋಪ ಹೊರಿಸಿ ದೂರು ಸಲ್ಲಿಸಿದ್ದರು.
ಈ ಆರೋಪದ ಬಗ್ಗೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಹನಿಸಿಂಗ್ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಹನಿಸಿಂಗ್ ಅವರ ಕಂಪನಿ ಮತ್ತು ದೂರುದಾರರ ನಡುವೆ ಯಾವುದೇ ಸಂಪರ್ಕ ಅಥವಾ ಒಪ್ಪಂದವಿಲ್ಲ ಎಂದು ಹೇಳಿದ್ದಾರೆ.
ಅವರು ಮುಂಬೈನಲ್ಲಿ ಪ್ರದರ್ಶನಕ್ಕಾಗಿ ಬುಕ್‌ಮೈಶೋನ ಸೋದರ ಕಂಪನಿಯಾದ ಟ್ರಿಬೆವಿಬ್ ಎಂಬ ಪ್ರಸಿದ್ಧ ಸಂಸ್ಥೆಯೊಂದಿಗೆ ತೊಡಗಿಸಿಕೊಂಡಿರೋದಾಗಿ ತಿಳಿಸಿದ್ದಾರೆ. ತನ್ನ ಇಮೇಜ್‌ಗೆ ಕಳಂಕ ತಂದ ದುಷ್ಕರ್ಮಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನಮ್ಮ ಕಾನೂನು ತಂಡವು ಈಗಾಗಲೇ ಕೆಲಸ ಮಾಡುತ್ತಿದೆ ಎಂದು ರಾಪರ್ ಹನಿ ಸಿಂಗ್ ಹೇಳಿದ್ದಾರೆ.
ಏಪ್ರಿಲ್ 15 ರಂದು ಮುಂಬೈನ ಎಂಎಂಆರ್‌ಡಿಎ ಮೈದಾನದಲ್ಲಿ ಫೆಸ್ಟಿವಿನಾ ಆಯೋಜಿಸಿದ್ದ ಯೋ ಯೋ ಹನಿ ಸಿಂಗ್ ಸಂಗೀತೋತ್ಸವವನ್ನು ವಿವೇಕ್ ರಾಮನ್ ರದ್ದುಗೊಳಿಸಿದ್ರು. ಬಳಿಕ ಹಣದ ವಿಚಾರದಲ್ಲಿ ವಿವಾದ ಉಂಟಾದ ನಂತರ ಹನಿ ಸಿಂಗ್ ಮತ್ತು ಇತರರು ಅವರನ್ನು ಅಪಹರಿಸಿ, ಹಲ್ಲೆ ನಡೆಸಿದ್ದಾರೆ ಎಂದು ವಿವೇಕ್ ರಾಮನ್ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ.