![](https://kannadadunia.com/wp-content/uploads/2023/03/99577b1b-cb24-4bf7-a5f1-4805a3dab409.jpg)
ದಿನೇ ದಿನೇ ಎಲೆಕ್ಟ್ರಿಕ್ ಚಾಲಿತ ವಾಹನಗಳ ಟ್ರೆಂಡ್ ಜೋರಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಆಟೋಮೊಬೈಲ್ ವಾಹನ ಉತ್ಪಾದಕರೆಲ್ಲಾ ಇದೀಗ ಇವಿಗಳ ಉತ್ಪಾದನೆಯತ್ತ ಸ್ಥಿರವಾಗಿ ವಾಲುತ್ತಿವೆ.
ದ್ವಿಚಕ್ರ ವಾಹನ ಕ್ಷೇತ್ರದ ದಿಗ್ಗಜ ಹೋಂಡಾ ಸಹ ಈ ವಿಚಾರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ ಶೈನ್ 100 ಸಿಸಿ ಬೈಕ್ ಬಿಡುಗಡೆ ಸಮಾರಂಭದಲ್ಲಿ ಈ ಬಗ್ಗೆ ತಿಳಿಸಿರುವ ಹೋಂಡಾ, ಮಾರ್ಚ್ 29ರಂದು ಭಾರತೀಯ ಮಾರುಕಟ್ಟೆಗೆ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಯೋಜನೆಗಳ ಕುರಿತು ತಿಳಿಸುವುದಾಗಿ ಹೇಳಿದೆ.
ಮುಂದಿನ ವರ್ಷದ ವೇಳೆ ಭಾರತದಲ್ಲಿ ಹೋಂಡಾದ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದೇ ವೇಳೆಗೆ ತನ್ನ ಅತ್ಯಂತ ಜನಪ್ರಿಯ ದ್ವಿಚಕ್ರ ವಾಹನ ಆಕ್ಟಿವಾ 6ಜಿಗೆ ಆಧುನಿಕ ಸ್ಪರ್ಶ ನೀಡುವ ಚಿಂತನೆಯನ್ನೂ ಹೋಂಡಾ ಮಾಡುತ್ತಿದೆ.
ಇದೇ ಆಕ್ಟಿವಾದ ಎಲೆಕ್ಟ್ರಿಕ್ ವಾಹನದ ಅವತರಣಿಕೆಯನ್ನು ಹೋಂಡಾ ತರುವ ನಿರೀಕ್ಷೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಆಕ್ಟಿವಾಗಳು ಬದಲಿಸಿಕೊಳ್ಳಬಹುದಾದ ಬ್ಯಾಟರಿಗಳೊಂದಿಗೆ ಬರುವ ನಿರೀಕ್ಷೆ ಇದ್ದು, ಒಮ್ಮೆ ಮಾರುಕಟ್ಟೆಗೆ ಬಂದಲ್ಲಿ ಒಕಿನಾವಾ ಹಾಗೂ ಹೀರೋ ಇವಿಗಳೊಂದಿಗೆ ಪೈಪೋಟಿ ನಡೆಸಲಿದೆ.
ಗುಜರಾತ್‌ನ ವಿಠ್ಠಲಪುರದಲ್ಲಿರುವ ತನ್ನ ಉತ್ಪಾದನಾ ಸೌಲಭ್ಯದಲ್ಲಿ ಇವಿ ಉತ್ಪಾದನಾ ವ್ಯವಸ್ಥೆ ಅಳವಡಿಸಲು ಹೋಂಡಾ ಭರದ ಸಿದ್ಧತೆಯಲ್ಲಿದೆ. ತನ್ನ ಇವಿ ವಾಹನಗಳ ಕಾರ್ಯಾಚರಣೆಯ ಜಾಲವಾಗಿ ಹೋಂಡಾ ಕರ್ನಾಟಕದ ನರಸಾಪುರದಲ್ಲಿರುವ ತನ್ನ ಮತ್ತೊಂದು ಘಟಕವನ್ನು ಮಾರ್ಪಾಡಿಸಬಹುದಾಗಿದೆ.