ಬಿಸಿ ಬಿಸಿ ಇಡ್ಲಿ ಜತೆ ಸಾಂಬಾರು ಹಾಕಿಕೊಂಡು ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಇಲ್ಲಿ ಸುಲಭವಾಗಿ ಮಾಡುವ ಒಂದು ಸಾಂಬಾರು ಇದೆ. ಒಮ್ಮೆ ಮನೆಯಲ್ಲಿ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
¼ ಕಪ್ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಅದಕ್ಕೆ ಸ್ವಲ್ಪ ನೀರು ಅರಿಶಿನ ಎಣ್ಣೆ ಹಾಕಿ ಕುಕ್ಕರ್ ನಲ್ಲಿ 2 ವಿಷಲ್ ಕೂಗಿಸಿಕೊಳ್ಳಿ.
ಹುಣಸೆಹಣ್ಣಿ ರಸ-3 ಟೇಬಲ್ ಸ್ಪೂನ್, ಟೊಮೆಟೊ-2, ಬೆಲ್ಲ-ಒಂದು ತುಂಡು, ಈರುಳ್ಳಿ-1, ಕೊತ್ತಂಬರಿ ಸೊಪ್ಪು-2 ಟೇಬಲ್ ಸ್ಪೂನ್, ಒಣಮೆಣಸು-2, ಸಾಸಿವೆ-1ಟೀ ಸ್ಪೂನ್, ಕರಿಬೇವು-10 ಎಸಳು, ಜೀರಿಗೆ-1 ಟೀ ಸ್ಪೂನ್, ಮೆಂತೆಕಾಳು-8, ಉಪ್ಪು-ರುಚಿಗೆ ತಕ್ಕಷ್ಟು, ಸಾಂಬಾರು ಪುಡಿ-2 ಚಮಚ, ಇಂಗು-ಚಿಟಿಕೆ, ಖಾರದ ಪುಡಿ-2 ಚಮಚ, ಎಣ್ಣೆ-2 ಚಮಚ.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಸಾಸಿವೆ, ಜೀರಿಗೆ ಮೆಂತೆ, ಇಂಗು ಕರಿಬೇವು, ಒಣಮೆಣಸು ಹಾಕಿ ಪ್ರೈ ಮಾಡಿ ನಂತರ ಈರುಳ್ಳಿ ಹಾಕಿ ಇದು ಕೆಂಪಾಗುತ್ತಿದ್ದಂತೆ ಟೊಮೆಟೊ ಸೇರಿಸಿ. ಟೊಮೆಟೊ ಮೆತ್ತಗಾದ ಮೇಲೆ ಖಾರದ ಪುಡಿ, ಅರಿಶಿನ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಇದಕ್ಕೆ ಬೇಯಿಸಿದ ಬೇಳೆ, ಹುಣಸೆಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ 2 ಕಪ್ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಸಾಂಬಾರು ಪುಡಿ ಹಾಕಿ ಕುದಿಯಲು ಬಿಡಿ. ಇದು ಚೆನ್ನಾಗಿ ಕುದಿದ ಬಳಿಕ ಬೆಲ್ಲ, ಕೊತ್ತಂಬರಿಸೊಪ್ಪು ಸೇರಿಸಿ 2 ನಿಮಿಷಗಳ ಕಾಲ ಕುದಿಸಿದರೆ ರುಚಿಕರವಾದ ಸಾಂಬಾರು ಸಿದ್ದ.