ಸರ್ಕಾರಿ ಅಧಿಕಾರಿಗಳು ಮಾಡುವ ಕೆಲವೊಂದು ಎಡವಟ್ಟುಗಳು ಬಡ ಕುಟುಂಬಗಳಿಗೆ ಯಾವ ಮಟ್ಟದಲ್ಲಿ ತೊಂದರೆಗೀಡು ಮಾಡುತ್ತವೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವೃದ್ಧಾಪ್ಯ ವೇತನ ಪಡೆಯುತ್ತಿದ್ದ 102 ವರ್ಷ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆಂದು ಸರ್ಕಾರಿ ದಾಖಲೆಗಳಲ್ಲಿ ದಾಖಲು ಮಾಡಿ ಅವರ ವೃದ್ಧಾಪ್ಯ ವೇತನವನ್ನು ತಡೆ ಹಿಡಿಯಲಾಗಿದೆ.
ಇಂತಹದೊಂದು ವಿಲಕ್ಷಣ ಪ್ರಕರಣ ಹರಿಯಾಣದ ರೋಟಕ್ ಜಿಲ್ಲೆಯಲ್ಲಿ ನಡೆದಿದೆ. ವೃದ್ಯಾಪ್ಯ ವೇತನ ತಡೆಹಿಡಿಯಲಾದ ಕಾರಣ ನೊಂದ ಸಂತ್ರಸ್ತ 102 ವರ್ಷದ ದುಲಿ ಚಂದ್ ತಾನು ಬದುಕಿದ್ದೇನೆ ಎಂದು ನಿರೂಪಿಸಲು ಬ್ಯಾಂಡ್ ಸೆಟ್ ಸಮೇತ ಮೆರವಣಿಗೆಯಲ್ಲಿ ಬಂದಿದ್ದಾರೆ. ಜೊತೆಗೆ ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಎಲ್ಲವನ್ನೂ ತಂದಿದ್ದಾರೆ.
ನೋಟಿನ ಹಾರವನ್ನು ಕುತ್ತಿಗೆಗೆ ಹಾಕಿಕೊಂಡಿದ್ದ ದುಲಿ ಚಂದ್, ಮೆರವಣಿಗೆಯಲ್ಲಿ ಬರುತ್ತಿದ್ದ ದೃಶ್ಯಾವಳಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಮಾರ್ಚ್ ತಿಂಗಳಿನಲ್ಲಿ ನನ್ನ ವೃದ್ಧಾಪ್ಯ ವೇತನ ತಡೆಹಿಡಿಯಲಾಗಿದೆ. ವಿಚಾರಿಸಲು ಹೋದ ವೇಳೆ ಮೃತಪಟ್ಟಿರುವ ಕಾರಣ ಇದನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ನಾನು ಜೀವಂತವಾಗಿದ್ದೇನೆ ಎಂದು ನಿರೂಪಿಸುವ ಅನಿವಾರ್ಯತೆ ಎದುರಾಗಿದೆ ಎಂದಿದ್ದಾರೆ.