ಮನೆಯಲ್ಲಿ ನಿತ್ಯ ದೇವರಿಗೆ ದೀಪ, ಧೂಪ ಹಚ್ಚಿ ಆರೋಗ್ಯ ಕಾಪಾಡು ಎನ್ನುವುದು ಎಲ್ಲರ ಪ್ರಾರ್ಥನೆಯಾಗಿರುತ್ತದೆ. ಆದರೆ ಅದೇ ದೇವರಿಗೆ ಕೆಮಿಕಲ್ ಧೂಪ ಹಚ್ಚಿ, ನಾವು ಕೂಡ ಅದನ್ನೇ ಸೇವಿಸಿದ್ರೆ ಕೆಮ್ಮು, ದಮ್ಮು ಕಟ್ಟಿಟ್ಟ ಬುತ್ತಿ. ದೇವರಿಗೂ ಪ್ರೀತಿಯಾಗುವ, ನಮ್ಮ ಆರೋಗ್ಯಕ್ಕೂ ಪೂರಕವಾಗುವ ರಾಸಾಯನಿಕ ಮುಕ್ತ ನೈಸರ್ಗಿಕ ಧೂಪ, ಅಗರಬತ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ ಗಮನಿಸಿ.
ಗೋ ಧೂಪ : ದೇಸಿ ಹಸುವಿನ ಸಗಣಿಯಿಂದ ತಯಾರಿಸಲಾಗುವ ಈ ಧೂಪಗಳು ಮನೆಯ ವಾತಾವರಣವನ್ನು ಶುದ್ಧ ಮಾಡುತ್ತವೆ. ಮನಸ್ಸಿಗೆ ಪ್ರಶಾಂತತೆ ನೀಡುವುದಲ್ಲದೇ ಸೊಳ್ಳೆಗಳ ಸಮಸ್ಯೆಯಿಂದಲೂ ಮುಕ್ತಿ ನೀಡುತ್ತವೆ. ಮಾನಸಿಕ ಕಿರಿ ಕಿರಿ ಇದ್ದರೂ ನಿವಾರಿಸುವ ಶಕ್ತಿ ಈ ಧೂಪಕ್ಕಿದೆ.
ಮೂಲಿಕೆಯ ಅಗರಬತ್ತಿ : ಕಾಡಿನಲ್ಲಿ ದೊರೆಯುವ ವಿವಿಧ ರೀತಿಯ ಮೂಲಿಕೆಗಳನ್ನು ಬಳಸಿ ಸಿದ್ಧ ಮಾಡಲಾದ ಕೆಮಿಕಲ್ ರಹಿತ ಅಗರಬತ್ತಿಗಳು ಲಭ್ಯವಿದೆ. ಇವು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಮನೆಯೊಳಗೆ ಸಂತಸದ ವಾತಾವರಣ ಹೆಚ್ಚಿಸುತ್ತದೆ.
ದೇವರ ಹೂಗಳಿಂದ ತಯಾರಿಸಿದ ಊದುಬತ್ತಿ : ದೇವಸ್ಥಾನದ ಹೂಗಳನ್ನು ಸಂಗ್ರಹಿಸಿ, ಒಣಗಿಸಿ ತಯಾರಿಸಿದ ಊದುಬತ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ದೇವರ ಪ್ರಸಾದದಂತೆ ಮನೆಯೊಳಗೆ ಅತ್ಯುತ್ತಮ ಘಮವನ್ನು ಪಸರಿಸುತ್ತವೆ. ಅಷ್ಟೇ ಅಲ್ಲದೇ ನೆಗೆಟಿವ್ ಎನರ್ಜಿಯನ್ನು ಹೋಗಲಾಡಿಸುತ್ತವೆ.
ಖಿನ್ನತೆ ನಿವಾರಿಸುವ ಊದುಗಡ್ಡಿ : ಮನೆಯಲ್ಲಿ ಯಾರಿಗಾದರೂ ಖಿನ್ನತೆ ಇದ್ದರೂ ಅದನ್ನು ನಿವಾರಿಸುವ ಊದುಗಡ್ಡಿಗಳಿವೆ. ಇದನ್ನು ಬೆಳಿಗ್ಗೆ, ಸಂಜೆ ಸಮಯ ಹಚ್ಚುವುದರಿಂದ ನಿಧಾನವಾಗಿ ಮನಸ್ಸು ಶಾಂತ ಸ್ಥಿತಿಗೆ ತಲುಪುತ್ತದೆ.
ಆದ್ದರಿಂದ ಕೆಮಿಕಲ್ ರಹಿತ ಊದುಬತ್ತಿಯ ಬದಲಿಗೆ ಇನ್ನು ಮುಂದೆ ನೈಸರ್ಗಿಕವಾಗಿ ತಯಾರಾದ ಅಗರಬತ್ತಿಯನ್ನೇ ದೇವರ ಮುಂದೆ ಹಚ್ಚಿ, ಸಮೃದ್ಧಿಯನ್ನು ಹೊಂದಬಹುದು.