ಬೆಂಗಳೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರೋಗ್ಯ ಜ್ಞಾನೇಂದ್ರ ‘ರೇಪ್’ ಪದ ಬಳಸಿ ವಿವಾದಿತ ಹೇಳಿಕೆ ನೀಡಿರುವುದು ವಿಪಕ್ಷಗಳಿಗೆ ಆಹಾರ ಒದಗಿಸಿದಂತಾಗಿದೆ.
ಯುವತಿ ಸಂಜೆ ವೇಳೆಗೆ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು. ಆದರೆ ಹೋಗಬೇಡಿ ಅಂತಾ ತಡೆಯಲೂ ಆಗಲ್ಲ ಎಂದು ಬೇಜವಾಬ್ದಾರಿತನದಿಂದ ಮಾತನಾಡಿದ್ದ ಅವರು, ಈ ಬಗ್ಗೆ ಕಾಂಗ್ರೆಸ್ ನಿಂದ ಟೀಕೆ ವ್ಯಕ್ತವಾಗ್ತಿದ್ದಂತೆ ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ತಮ್ಮ ಮಾತು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಕಾಂಗ್ರೆಸ್‌ನವರು ಗೃಹ ಸಚಿವರ ಮೇಲೆ ರೇಪ್ ಮಾಡ್ತಿದ್ದಾರೆ ಎಂದು ಅವರ ಮನಸ್ಸಿಗೆ ನೋವುಂಟು ಮಾಡಲು ಹೇಳಿಲ್ಲ. ತಮಾಷೆ ರೀತಿಯಲ್ಲಿ ಮಾತಾಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.
ಹೀಗಿರುವಾಗಲೇ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕಡೆಯಿಂದಲೂ ಕಟ್ಟುನಿಟ್ಟಿನ ಸೂಚನೆ ಬಂದಿದೆ. ಗೃಹ ಸಚಿವರ ಹೇಳಿಕೆಗೆ ನನ್ನ ಸಹಮತವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರ ಹೇಳಿಕೆಗೆ ನನ್ನ ಸಹಮತವಿಲ್ಲ. ನೀವು ನೀಡಿರುವ ಹೇಳಿಕೆಗೆ ಸ್ಪಷ್ಟೀಕರಣ ನೀಡುವಂತೆ ಅವರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.