ಬೆಂಗಳೂರು: ರಾಜ್ಯದಲ್ಲಿ ಶೀಘ್ರವೇ ಸೈಬರ್ ಸೆಕ್ಯೂರಿಟಿ ಪಾಲಿಸಿ ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆ, ಸಿಐಡಿ, ಸೈಬರ್ ಕ್ರೈಂ ತನಿಖಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸೈಬರ್ ಅಪರಾಧ ತನಿಖಾ ಶೃಂಗಸಭೆ ಉದ್ಘಾಟಿಸಿ ಅವರು ಮಾತನಾಡಿ, ಬಹುತೇಕ ವಲಯದಲ್ಲಿ ಡಿಜಿಟಲ್ ಸೇವೆ ಹೆಚ್ಚಾಗಿದ್ದು, ಇದಕ್ಕೆ ಪೂರಕವಾಗಿ ಸೈಬರ್ ಭದ್ರತೆ ಕುರಿತು ಅರಿತುಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಐಟಿ ಬಿಟಿ ಚಟುವಟಿಕೆ ಹೆಚ್ಚಾಗಿದ್ದು, ಸೈಬರ್ ಸೆಕ್ಯೂರಿಟಿ ಪಾಲಿಸಿಯಿಂದ ಅನುಕೂಲವಾಗುತ್ತದೆ. ಅಕ್ರಮ ಹಣ ವರ್ಗಾವಣೆ, ಆನ್ಲೈನ್ ಬ್ಯಾಂಕಿಂಗ್, ಲೋನ್ ಅಪ್ಲಿಕೇಶನ್ ವಂಚನೆ, ಡೀಪ್ ಫೇಕ್ ಸೇರಿದಂತೆ ಅನೇಕ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ.
ಗಂಭೀರ ಪ್ರಕರಣಗಳಲ್ಲಿ ವಿದೇಶಿ ಕಂಪನಿಗಳ ನೆರವು ಸಿಗದಿದ್ದರೆ ತನಿಖೆಗೆ ಕಷ್ಟವಾಗುತ್ತದೆ. ಸೈಬರ್ ಕ್ರೈಂ ಜಾಗತಿಕ ಸಮಸ್ಯೆಯಾಗಿದೆ. ಸೈಬರ್ ಅಪರಾಧಿಗಳು ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತು ವಂಚನೆ, ಬೆದರಿಕೆ, ಸೈಬರ್ ದಾಳಿ ನಡೆಸುತ್ತಾರೆ. ಇದು ಆಯಾ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತನಿಖೆ ನಡೆಸಿ ಅಪರಾಧಿಗಳನ್ನು ಮಟ್ಟ ಹಾಕಲು ಜಾಗತಿಕ ಮಟ್ಟದ ಸಹಯೋಗ ಬೇಕಾಗುತ್ತದೆ ಎಂದು ಹೇಳಿದ್ದಾರೆ.