ಶಿವಮೊಗ್ಗ: ಹೋಳಿಗೆ, ಮಲೆನಾಡಿನ ತಿಂಡಿ-ತಿನಿಸುಗಳಿಂದಲೇ ವಿದೇಶಗಳಲ್ಲಿಯೂ ಜನಪ್ರಿಯತೆ ಪಡೆದಿದ್ದ ಶಿವಮೊಗ್ಗದ ಹೋಳಿಗೆ ಗೌರಮ್ಮ ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಗೌರಮ್ಮ (88) ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗ ನಗರದ ದೊಡ್ದ ಬ್ರಾಹ್ಮಣರ ಬೀದಿಯಲ್ಲಿ ವಾಸವಾಗಿದ್ದ ಗೌರಮ್ಮ ಹೋಳಿಗೆ ಮಾಡುವುದರಲ್ಲಿ ನಿಷ್ಣಾತರಾಗಿದ್ದರು. ಕಡುಬಡತನದಲ್ಲಿ ಹುಟ್ಟಿಬೆಳೆದಿದ್ದ ಗೌರಮ್ಮ, ಮದುವೆ ಬಳಿಕ ಹೋಳಿಗೆ ಮಾಡಲು ಕಲಿತು ಹೋಳಿಗೆ ವ್ಯಾಪಾರ ಮಾಡುತ್ತಿದ್ದರು.
ಕಾಯಿ ಹೋಳಿಗೆ, ಬೇಳೆ ಹೋಳಿಗೆ ಸೇರಿದಂತೆ ವಿವಿಧ ರೀತಿಯ ಹೋಳಿಗೆ ತಯಾರಿಸಿ ರಿಯಾಯಿತಿ ದರದಲ್ಲಿ ಮಾರುತ್ತಿದ್ದರು. ಅಲ್ಲದೆ ಬಾಣಂತಿಯರಿಗೆ ವಿಶೇಷವಾದ ಅಂಟಿನುಂಡೆ, ಮದುವೆ ಮನೆಗಳಿಗೆ ಅವಲಕ್ಕಿ ಉಂಡೆ, ಚಕ್ಕುಲಿ, ರವೆ ಉಂಡೆ, ವಿವಿಧ ರೀತಿಯ ಲಡ್ಡುಗಳನ್ನು ತಯಾರಿಸುವಲ್ಲಿ ಪರಿಣಿತರಾಗಿದ್ದರು. ಗೌರಮ್ಮ ಅವರ ಕೈರುಚಿ ಹಾಗೂ ಗುಣಮಟ್ಟದ ಹೋಳಿಗೆ, ತಿಂಡಿ-ತಿನಿಸುಗಳು ರಾಜ್ಯ, ಹೊರ ರಾಜ್ಯ ಮಾತ್ರವಲ್ಲ ವಿದೇಶಗಳಲ್ಲಿಯೂ ಜನಪ್ರಿಯತೆ ಪಡೆದುಕೊಂಡಿತ್ತು. ವಿದೇಶದಲ್ಲಿ ವಾಸವಾಗಿರುವ ಹಲವರು ಶಿವಮೊಗ್ಗದ ಹೋಳಿಗೆ ಗೌರಮ್ಮ ಅವರಿಂದ ಹೋಲಿಗೆ ತಿಂಡಿಗಳನ್ನು ತರಿಸಿಕೊಳ್ಳುತ್ತಿದ್ದರು.
ಗೌರಮ್ಮ ಅವರ ಕಾರ್ಯಗಳನ್ನು ಕಂಡು ಶಿವಮೊಗ್ಗ ಮಹಾನಗರ ಪಾಲಿಕೆ, ಜಿಲ್ಲಾ ಹಾಗೂ ತಾಲೂಕು ಬ್ರಾಹ್ಮಣ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿತ್ತು.