ಶಿವಮೊಗ್ಗ: ಈ ಬಾರಿ ಪಠ್ಯ ಕಡಿತಗೊಳಿಸದೆ ಶಿಕ್ಷಕರ ರಜೆ ಕಡಿತಗೊಳಿಸಲಾಗುವುದು. ರಜೆ ಕಡಿಮೆಮಾಡಿ ಕಲಿಕಾ ಅವಧಿ ನಷ್ಟ ಸರಿದೂಗಿಸಲು ಚಿಂತನೆ ನಡೆಸಲಾಗಿದೆ. ಪಠ್ಯ ಕಡಿತಗೊಳಿಸದೆ ಪಾಠಗಳನ್ನು ಪೂರ್ಣಗೊಳಿಸುವ ಚಿಂತನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರುವ ಪಠ್ಯ ಪೂರ್ಣಗೊಳಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಪಠ್ಯ ಕಡಿತಗೊಳಿಸಿದರೆ ಅವರಿಗೆ ನಷ್ಟವಾಗುತ್ತದೆ. ಕಳೆದ ಒಂದುವರೆ ವರ್ಷದಿಂದ ಮಕ್ಕಳಿಗೆ ಸಮರ್ಪಕವಾಗಿ ಕಲಿಕೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಕರ ರಜೆ ಕಡಿತಗೊಳಿಸಿ ಪೂರ್ಣ ಪಠ್ಯಕ್ರಮ ತೆಗೆದುಕೊಳ್ಳುವ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
ಇದಕ್ಕೆ ಶಿಕ್ಷಕರ ಸಹಕಾರ ಕೂಡ ಅಗತ್ಯವಾಗಿದೆ. ಪಠ್ಯ ಕೈಬಿಡುವುದರಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗುತ್ತದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಕರ ರಜೆ ಕಡಿತಗೊಳಿಸುವ ಚಿಂತನೆಯಿದೆ. ಕಲಿಕಾ ಅವಧಿ ನಷ್ಟ ಸರಿದೂಗಿಸಲು ಶಿಕ್ಷಕರ ಸಹಕಾರ ಪಡೆಯಲಾಗುವುದು. ಎಂದು ಸಚಿವರು ತಿಳಿಸಿದ್ದಾರೆ.