ಬಳ್ಳಾರಿ: ಏ.27 ರಂದು ನಡೆಯುವ ಬಳ್ಳಾರಿ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2021ಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮತದಾನ ಕೇಂದ್ರ ಸ್ಥಾಪಿಸಿದ ಸರ್ಕಾರಿ/ಅನುದಾನಿತ ಶಾಲಾ/ಕಾಲೇಜ್ /ಸರ್ಕಾರಿ ಕಛೇರಿಗಳಿಗೆ ಏ.26 ರಂದು ಚುನಾವಣೆಯ ಪೂರ್ವ ತಯಾರಿಗಾಗಿ ಮತ್ತು ಏ.27ರಂದು ಮತದಾನ ದಿನ ಒಟ್ಟು ಎರಡು ದಿನ ಸರ್ಕಾರಿ ರಜೆ ಘೋಷಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಬಳ್ಳಾರಿ ಮಹಾನಗರಪಾಲಿಕೆ ನಗರ ಸ್ಥಳೀಯ ಸಂಸ್ಥೆಯ ಸಾರ್ವತ್ರಿಕ ಚುನಾವಣೆಯು ಏ.27ರಂದು ಜರುಗಲಿದ್ದು, ಸದ್ರಿ ಮಹಾನಗರಪಾಲಿಕೆ ವ್ಯಾಪ್ತಿಗೆ ಒಟ್ಟು 338 ಮತಗಟ್ಟೆಗಳು ಇರುತ್ತವೆ. ಎಲ್ಲಾ ಮತಗಟ್ಟೆ ಸಿಬ್ಬಂದಿಗಳು ಏ.26ರಂದು ಡಿಮಸ್ಟರಿಂಗ್ ಸ್ಥಳದಿಂದ ಸಂಬಂಧಪಟ್ಟ ಮತಗಟ್ಟೆಗಳಿಗೆ ತೆರಳಲಿದ್ದಾರೆ. ಆದ್ದರಿಂದ ಮತದಾನ ನಡೆಯುವ ಮತಗಟ್ಟೆಯನ್ನು ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಸ್ಥಾಪಿಸಿದಲ್ಲಿ ಅಂತಹ ಕಛೇರಿ ಹಾಗೂ ಶಾಲೆಗಳಿಗೆ ಏ.26ರಂದು ಸೋಮವಾರ ಪೂರ್ವ ತಯಾರಿಗಾಗಿ ಹಾಗೂ ಏ.27 ರಂದು ಮತದಾನ ದಿನದಂದು ಬಳ್ಳಾರಿ ಮಹಾನಗರಪಾಲಿಕೆ ವ್ಯಾಪ್ತಿಯ ಮತಗಟ್ಟೆಗಳ ಶಾಲಾ ಕಾಲೇಜು, ಸರ್ಕಾರಿ ಕಛೇರಿಗಳಿಗೆ ರಜೆ ಘೋಷಿಸುವುದು ಅವಶ್ಯಕತೆ ಇರುವುದರಿಂದ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.