
ಅಗರ್ತಲಾ: ತ್ರಿಪುರಾದ ಖೋವಾಯ್ ಜಿಲ್ಲೆಯಲ್ಲಿ ಮಾರ್ಚ್ 29 ರಂದು ಹೋಳಿ ಹಬ್ಬದ ದಿನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 19 ರಿಂದ 23 ವರ್ಷ ವಯಸ್ಸಿನ 8 ಮಂದಿ ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
14 ಮತ್ತು 15 ವರ್ಷ ವಯಸ್ಸಿನ ಬಾಲಕಿಯರ ಖೋವಾಯ್ ಪುಟಾಲಿ ಪ್ರದೇಶದ ನಿವಾಸಿಗಳಾಗಿದ್ದು, ಆರೋಪಿಗಳಾದ ಯುವಕರಿಗೆ ಪರಿಚಿತರಾಗಿದ್ದಾರೆ. ಹೋಳಿ ಆಚರಣೆಗೆ ತೆರಳಿದ್ದ ಬಾಲಕಿಯರು ಮನೆಗೆ ಹಿಂತಿರುಗಿರಲಿಲ್ಲ. ಅವರ ಪೋಷಕರು ಕೂಡ ಹುಡುಕಾಡಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ.
ಮರುದಿನ ಮಾರ್ಚ್ 30 ರಂದು ಮನೆಗೆ ಮರಳಿದ ಬಾಲಕಿಯರು ಸಾಮೂಹಿಕ ಅತ್ಯಾಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಆಘಾತಕ್ಕೆಕ್ಕೆ ಒಳಗಾಗಿರುವ ಬಾಲಕಿಯರ ದೇಹದ ಮೇಲೆ ಗಾಯಗಳಾಗಿವೆ. ಇಡೀ ರಾತ್ರಿ 8 ಮಂದಿ ಯುವಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕುಟುಂಬದ ಸದಸ್ಯರಿಗೆ ಬಾಲಕಿಯರು ತಿಳಿಸಿದ್ದಾರೆ. ಇದಾದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.. ಬಾಲಕಿಯರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಣ್ಣಗಳ ಹಬ್ಬದ ಸಂಭ್ರಮಾಚರಣೆ ನಂತರ ಬಾಲಕಿಯರನ್ನು ಕಾಡಿಗೆ ಕರೆದೊಯ್ದು ರಾತ್ರಿಯಿಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅವರು ಮೃತಪಟ್ಟಿದ್ದಾರೆ ಎಂದು ಭಾವಿಸಿ ಯುವಕರು ಅಲ್ಲಿಂದ ತೆರಳಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಲಕಿಯರ ಹೇಳಿಕೆ ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅತ್ಯಾಚಾರ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.