ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಸಿಎಂ ಸಿದ್ದರಾಮಯ್ಯ, ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಹೊಳೆಹೊನ್ನೂರಿನಲ್ಲಿ ಗಾಂಧಿ ಪ್ರತಿಮೆ ಧ್ವಂಸಗೊಳಿಸಿರುವುದು ದೇಶವಿರೋಧಿ ಕೃತ್ಯ. ಈ ನೆಲದ ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆ, ಸಂವಿಧಾನ ಮತ್ತು ಕಾನೂನಿನ ಬಗ್ಗೆ ಗೌರವ ಇಲ್ಲದವರು ಮಾತ್ರ ಇಂತಹ ಹೀನ ಕೃತ್ಯ ಎಸಗಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಗಾಂಧಿ ಪ್ರತಿಮೆ ಧ್ವಂಸ ಪ್ರಕರಣದ ಹಿಂದೆ ಯಾರೇ ಇರಲಿ ಅವರನ್ನು ಹಿಡಿದು ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಯಾರೊಬ್ಬರೂ ಉದ್ವೇಗಕ್ಕೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳದೇ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಹೊಳೆಹೊನ್ನೂರು ಪ್ರಮುಖ ವೃತ್ತದಲ್ಲಿದ್ದ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಘಟನೆ ಖಂಡಿಸಿ ಸ್ಥಳೀಯರು, ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.