ಬೆಂಗಳೂರು: ಪ್ರತಿಷ್ಠಿತ ಹೆಚ್ಎಂಟಿ ಕಂಪನಿ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶನಿವಾರ ಹೆಚ್.ಎಂ.ಟಿ. ಕಂಪನಿಯ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಅವರು, ಕಂಪನಿಯ ಕಾರ್ಯ ಚಟುವಟಿಕೆಗಳ ಕುರಿತಾಗಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಕಂಪನಿಯ ಉತ್ಪಾದನೆ, ವಹಿವಾಟು, ನಿವ್ವಳ ಲಾಭ ಮತ್ತಿತರ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆ ವೀಕ್ಷಿಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ.
ಅನೇಕ ದಶಕಗಳ ಕಾಲ ವೈಭವಯುತವಾಗಿ ಮೆರೆದಿದ್ದ ಹೆಚ್‌ಎಂಟಿ ಕಂಪನಿ ಈಗ ದುಸ್ಥಿತಿಗೆ ತಲುಪಿದೆ. ಕಂಪನಿಯನ್ನು ಮತ್ತಷ್ಟು ಸದೃಢಗೊಳಿಸಲು ಅಗತ್ಯ ಉಪಕ್ರಮ ಕೈಗೊಳ್ಳಬೇಕಿದ್ದು, ಇದಕ್ಕೆ ಪೂರಕವಾದ ಪ್ರಸ್ತಾವನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆತ್ಮ ನಿರ್ಭರ ಪರಿಕಲ್ಪನೆಯ ಮೂಲಕ ಹೆಚ್ಎಂಟಿ ಕಂಪನಿ ಪುನರುಜ್ಜೀವನಗೊಳಿಸಬಹುದಾಗಿದೆ. ಇದಕ್ಕೆ ಅಗತ್ಯ ನೆರವನ್ನು ಕೇಂದ್ರ ಸರ್ಕಾರ ಒದಗಿಸಲಿದೆ ಎಂದು ಹೇಳಿದ್ದಾರೆ.
ರಕ್ಷಣಾ ಇಲಾಖೆ ಮತ್ತು ಬಾಹ್ಯಾಕಾಶ ಯೋಜನೆಗಳಿಗೆ ಹೆಚ್ಎಂಟಿ ಪರಿಕರಗಳನ್ನು ಉತ್ಪಾದಿಸಿ ಪೂರೈಸುತ್ತಿದ್ದು, ದೇಶದ ಉದ್ದಗಲಕ್ಕೂ ಕಂಪನಿಯ ಉತ್ಪಾದನಾ ಘಟಕಗಳಿವೆ. ಹೀಗಾಗಿ ಕಂಪನಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು ಎಂದು ಹೆಚ್.ಡಿ.ಕೆ. ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ, ಕೋಲಾರ ಸಂಸದ ಮಲ್ಲೇಶ್ ಬಾಬು, ಕಂಪನಿಯ ನಿರ್ದೇಶಕಿ ಸಮೀನಾ ಕೊಹ್ಲಿ ಹಿರಿಯ ಅಧಿಕಾರಿಗಳು ಇದ್ದರು.