ಬೆಂಗಳೂರು: ಸಿವಿಲ್ ಪ್ರಕ್ರಿಯ ಸಂಹಿತೆ ಕರ್ನಾಟಕ(ತಿದ್ದುಪಡಿ) ವಿಧೇಯಕ -2023 ಅನ್ನು ಗುರುವಾರ ವಿಧಾನ ಪರಿಷತ್ ನಲ್ಲಿ ವಿಪಕ್ಷಗಳ ಸದಸ್ಯರ ಗೈರು ಹಾಜರಿ ನಡುವೆ ಅಂಗೀಕರಿಸಲಾಗಿದೆ.
ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದ್ದ ಮಸೂದೆಗೆ ವಿಧಾನ ಪರಿಷತ್ ನಲ್ಲೂ ಅಂಗೀಕಾರ ದೊರೆತಿದೆ. ವಿಧೇಯಕ ಮಂಡಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿಯೂ ಸಣ್ಣ ಅತಿ ಸಣ್ಣ ರೈತರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸೇರಿದ ವ್ಯಾಜ್ಯಗಳನ್ನು ಆರು ತಿಂಗಳ ಕಾಲ ಮಿತಿಯಲ್ಲಿ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಸಿವಿಲ್ ಪ್ರಕ್ರಿಯ ಸಂಹಿತೆ ಕರ್ನಾಟಕ(ತಿದ್ದುಪಡಿ) ವಿಧೇಯಕ -2023 ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ನ್ಯಾಯದಾನ ವಿಳಂಬವಾಗುತ್ತಿರುವುದರಿಂದ ಸಣ್ಣ ರೈತರು ಮತ್ತು ಆರ್ಥಿಕ ದುರ್ಬಲ ವರ್ಗದವರಿಗೆ ತೊಂದರೆಯಾಗುತ್ತಿದೆ. ಆರ್ಥಿಕವಾಗಿ ಬಲ ಇಲ್ಲದೆ ಎಷ್ಟೋ ಮಂದಿ ಪ್ರಕರಣಗಳನ್ನು ಅರ್ಧಕ್ಕೆ ಕೈಬಿಟ್ಟಿದ್ದಾರೆ. ಹೀಗಾಗಿ ಕೋರ್ಟ್ ಗಳಲ್ಲಿ ತ್ವರಿತಗತಿಯ ನ್ಯಾಯದಾನಕ್ಕಾಗಿ ಈ ವಿಧೇಯಕ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ನ್ಯಾಯಾಲಯಗಳಲ್ಲಿ ಸಣ್ಣ ರೈತರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಪ್ರಕರಣಗಳನ್ನು ಆಯಾ ದಿನದ ವಿಚಾರಣೆಯಲ್ಲಿ ಆದ್ಯತೆಯ ಮೇಲೆ ಕೈಗೊಳ್ಳಬೇಕು. ಆರು ತಿಂಗಳು ಕಾಲಮಿತಿಯಲ್ಲಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ಬಾಕಿ ಪ್ರಕರಣಗಳಿಗೂ ಕೂಡ ವಿಧೇಯಕ ಜಾರಿಗೆ ಬಂದ ನಂತರ ವಿಚಾರಣೆಗೆ ನಿಗದಿಯಾದ ದಿನದಿಂದ ನಂತರ ಕಾಲಮಿತಿ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.