ಬೆಂಗಳೂರು: ಗೌಪ್ಯತೆ ಕಾಪಾಡದೇ ಹೆಚ್ಐವಿ ಸೋಂಕಿತ ಉದ್ಯೋಗಿ ಒಬ್ಬರಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಕಂಪನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನ್ಯಾಯಾಲಯದ ಪಿಸಿಆರ್ ಮೂಲಕ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಕಂಪನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಉದ್ಯೋಗಿಯೊಬ್ಬರು ಹೆಚ್ಐವಿ ಬಾದಿತರಾಗಿದ್ದರು. ಅವರನ್ನು ಕಂಪನಿಯಲ್ಲಿ ಪ್ರತ್ಯೇಕ ಜಾಗದಲ್ಲಿ ಕೂರಿಸಲಾಗಿತ್ತಂತೆ. ಅಲ್ಲದೇ ವರ್ಕ್ ಫ್ರಂ ಹೋಂ ಮಾಡಲು ಸೂಚಿಸಲಾಗಿತ್ತಂತೆ. ಬಳಿಕ ಹಾಜರಾತಿ ಇಲ್ಲ ಎಂದು ಸಂಬಳ ನೀಡದೇ ಕಿರುಕುಳ ನೀಡಿರುವ ಆರೋಪವೂ ಕೇಳಿಬಂದಿದೆ.
ಕಾನೂನು ಪ್ರಕಾರ ಹೆಚ್ ಐವಿ ಸೋಂಕಿತರ ಬಗ್ಗೆ ಗೌಪ್ಯತೆ ಕಾಪಾಡಬೇಕು. ಗೌಪ್ಯತೆ ಕಾಪಾಡದೇ ಕಿರುಕುಳ ನೀಡಿದ್ದಕ್ಕಾಗಿ ಕಂಪನಿ ವಿರುದ್ಧ ಸಂತ್ರಸ್ತ ಉದ್ಯೋಗಿ ಕೋರ್ಟ್ ಮೊರೆ ಹೋಗಿದ್ದಾರೆ. ಮಾನಹಾನಿ ಮಾಡಿದ್ದಲ್ಲದೇ, ಕೆಲಸ ಮಾಡಿಸಿಕೊಂಡು ಸಂಬಳವನ್ನೂ ಕೊಟ್ಟಿಲ್ಲ ಎಂದು ಉದ್ಯೋಗಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಪಿಸಿಆರ್ ಮೂಲಕ ಮೈಕೋ ಲೇಔಟ್ ಠಾಣೆಯಲ್ಲಿ ಕಂಪನಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.