ಬರೋಬ್ಬರಿ ಆರು ಎಟಿಎಂಗಳ ಪರದೆಯನ್ನು ಸಂಪೂರ್ಣ ಹಾಳು ಮಾಡಿದ ಆರೋಪದ ಅಡಿಯಲ್ಲಿ 50 ವರ್ಷದ ವ್ಯಕ್ತಿಯನ್ನು ಬಂಧಿಸಿದ ತಿರುವಳ್ಳೂರು ಜಿಲ್ಲೆಯ ತಿರುನಿನರವೂರಿನಲ್ಲಿ ನಡೆದಿದೆ.
ತಿರುನಿನರವೂರಿನ ನಿವಾಸಿಯಾದ ಶೇಷಾದ್ರಿಯು ಪ್ರಕಾಶ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸೆಪ್ಟೆಂಬರ್ 21ರಂದು ಸುತ್ತಿಗೆ ಸಮೇತ ತಿರುನಿನರವೂರಿನ ಪೊಲೀಸ್ ಠಾಣೆಗೆ ತೆರಳಿದ ಶೇಷಾದ್ರಿ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾರೆ. ಎಟಿಎಂ ಕಾರ್ಡ್ನಲ್ಲಿ ಹಣವಿಲ್ಲ ಎಂದು ಸಂದೇಶ ತೋರಿಸುತ್ತಿದ್ದ ಹಿನ್ನೆಲೆಯಲ್ಲಿ ತಾನು ಕೋಪಗೊಂಡು ಆರು ಎಟಿಎಂಗಳ ಪರದೆಯನ್ನು ಹಾಳು ಮಾಡಿದ್ದಾಗಿ ಹೇಳಿದ್ದಾರೆ.
ವಿಚಾರಣೆಯ ವೇಳೆ ಶೇಷಾದ್ರಿ ಕಳೆದ 10 ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದರು ಎಂದು ತಿಳಿದುಬಂದಿದೆ. ಆದರೆ ಕೊರೊನಾದಿಂದಾಗಿ ವ್ಯವಹಾರದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಶೇಷಾದ್ರಿ ಮದ್ಯಪಾನದ ಚಟವನ್ನು ಶುರು ಮಾಡಿದ್ದರು. ಮನೆ ಖರ್ಚಿಗೆ ಹಣ ನೀಡಲು ಸಾಧ್ಯವಾಗದೇ ಹತಾಶೆಯಲ್ಲಿದ್ದ ಶೇಷಾದ್ರಿ ಕ್ರಮೇಣ ಮದ್ಯಪಾನದ ಚಟವನ್ನು ಹೆಚ್ಚು ಮಾಡಿದ್ರು. ಸೆಪ್ಟೆಂಬರ್ 20ರಂದು ಪತ್ನಿಯ ಜೊತೆ ಮುನಿಸಿಕೊಂಡು ರಾತ್ರೋ ರಾತ್ರಿ ಮನೆ ಬಿಟ್ಟು ತೆರಳಿದ್ದರು.
ಮದ್ಯದ ಅಮಲಿನಲ್ಲಿ ಮುಖ್ಯ ರಸ್ತೆಗೆ ಬಂದು ತಲುಪಿದ ಶೇಷಾದ್ರಿ ಎಟಿಎಂನಿಂದ ಹಣ ಡ್ರಾ ಮಾಡಲು ಮುಂದಾಗಿದ್ದಾರೆ. ಆದರೆ ಶೇಷಾದ್ರಿ ಖಾತೆಯಲ್ಲಿ ನಯಾಪೈಸೆ ಕೂಡ ಇರಲಿಲ್ಲ. ಇದರಿಂದ ಕೋಪಗೊಂಡ ಶೇಷಾದ್ರಿ ಎಸ್ಬಿಐ, ಕೆನರಾ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ಗೆ ಸೇರಿದ ಎಟಿಎಂಗೆ ಹಾನಿಯುಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ.