ಪ್ರತಿ ರಾಜಕೀಯ ಪಕ್ಷಕ್ಕೂ ಚುನಾವಣಾ ಚಿಹ್ನೆ ಬಹಳ ಮುಖ್ಯ. ಇದು ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಗುರುತಿಸಲು ಸಹಾಯ ಮಾಡುತ್ತದೆ. ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಮತ್ತು ಅತಿದೊಡ್ಡ ಪಕ್ಷವಾದ ಬಿಜೆಪಿಗೆ ಕೈ ಮತ್ತು ಕಮಲದ ಚುನಾವಣಾ ಚಿಹ್ನೆಗಳು ಸಿಕ್ಕಿವೆ. ಇವುಗಳ ಹಿಂದಿನ ಆಸಕ್ತಿಕರ ಸಂಗತಿಗಳನ್ನು ತಿಳಿಯೋಣ.
ಭಾರತದಲ್ಲಿ ಚುನಾವಣಾ ಚಿಹ್ನೆಗಳ ಪರಿಚಯ
1951-52ರಲ್ಲಿ ಮೊದಲ ಲೋಕಸಭೆ ಚುನಾವಣೆ ನಡೆಸಲಾಯ್ತು. ಈ ಸಮಯದಲ್ಲಿ ಚುನಾವಣಾ ಚಿಹ್ನೆ ಬಹಳ ಮುಖ್ಯ ಎಂಬುದು ಆಯೋಗದ ಅರಿವಿಗೆ ಬಂದಿತ್ತು. ಜನರಲ್ಲಿ ಚಿರಪರಿಚಿತವಾಗಿರುವ ಮತ್ತು ಸುಲಭವಾಗಿ ಗುರುತಿಸಬಹುದಾದಂತಹ ಚುನಾವಣಾ ಚಿಹ್ನೆಗಳನ್ನು ಬಳಸಲು ನಿರ್ಧರಿಸಲಾಯ್ತು. ಗೋವು, ದೇವಸ್ಥಾನ, ರಾಷ್ಟ್ರಧ್ವಜ ಮತ್ತು ಚರಕಾದಂತಹ ಯಾವುದೇ ಧಾರ್ಮಿಕ ಅಥವಾ ಭಾವನಾತ್ಮಕ ಅರ್ಥವನ್ನು ಹೊಂದಿರುವ ಚಿಹ್ನೆಗಳನ್ನು ಬಳಸಬಾರದೆಂದು ಆಯೋಗ ನಿರ್ಧರಿಸಿತ್ತು. ಮೊದಲ ಲೋಕಸಭೆ ಚುನಾವಣೆ ವೇಳೆ ಒಟ್ಟು 26 ಚಿಹ್ನೆಗಳನ್ನು ಬಳಸಲು ಅನುಮತಿಸಲಾಯ್ತು.
ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆ
1951-52ರ ಲೋಕಸಭಾ ಚುನಾವಣೆಯ ಮೊದಲು ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆಯಾಗಿ ‘ನೊಗದೊಂದಿಗೆ ಜೋಡಿ ಎತ್ತುಗಳನ್ನು’ ಆಯೋಗ ಅಂತಿಮಗೊಳಿಸಿತ್ತು. ಆದರೆ ಕುತೂಹಲಕಾರಿ ಸಂಗತಿಯೆಂದರೆ ಕಾಂಗ್ರೆಸ್ ಪಕ್ಷದ ಪ್ರಸ್ತುತ ಚುನಾವಣಾ ಚಿಹ್ನೆ ‘ಕೈ’ ಅನ್ನು ಆ ಸಮಯದಲ್ಲಿ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್‌ಗೆ ನೀಡಲಾಯಿತು. 1969ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಉಂಟಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಎರಡು ಭಾಗಗಳಾಗಿ ವಿಭಜನೆಯಾಯಿತು. ಒಂದು ಕಾಂಗ್ರೆಸ್ (ಒ) ಮತ್ತು ಇನ್ನೊಂದು ಕಾಂಗ್ರೆಸ್ (ಆರ್). ಕಾಂಗ್ರೆಸ್ (ಒ) ಅನ್ನು ಅಂದಿನ ಕಾಂಗ್ರೆಸ್ ಅಧ್ಯಕ್ಷ ಎಸ್. ನಿಜಲಿಂಗಪ್ಪ ಮುನ್ನಡೆಸಿದರೆ, ಕಾಂಗ್ರೆಸ್ (ಆರ್) ನೇತೃತ್ವವನ್ನು ಜಗಜೀವನ್ ರಾಮ್ ವಹಿಸಿದ್ದರು. ಜಗಜೀವನ್ ರಾಮ್ ಅವರಿಗೆ ಇಂದಿರಾ ಗಾಂಧಿಯವರ ಬೆಂಬಲವಿತ್ತು.
1971ರಲ್ಲಿ ಚುನಾವಣಾ ಆಯೋಗ ಜಗಜೀವನ್ ರಾಮ್ ನೇತೃತ್ವದ ಪಕ್ಷ ನಿಜವಾದ ಕಾಂಗ್ರೆಸ್ ಎಂದು ತೀರ್ಮಾನಿಸಿತ್ತು. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತು. ಈ ಎರಡು ಗುಂಪುಗಳಲ್ಲಿ ಯಾರಿಗೂ ನೊಗ ಹೊಂದಿರುವ ಜೋಡಿ ಎತ್ತುಗಳ ಚಿಹ್ನೆ ನೀಡದಂತೆ ಸೂಚಿಸಿತ್ತು. ಬಳಿಕ ಚುನಾವಣಾ ಆಯೋಗವು ಕಾಂಗ್ರೆಸ್ (O)ಗೆ ಚುನಾವಣಾ ಚಿಹ್ನೆಯಾಗಿ ‘ಚರಕವನ್ನು ನೂಲುವ ಮಹಿಳೆ’ ಮತ್ತು ಕಾಂಗ್ರೆಸ್ (R) ಗೆ ‘ಹಸು ಮತ್ತು ಕರು’ವಿನ ಚಿಹ್ನೆಯಾಗಿ ನೀಡಿತು.
ಕಾಂಗ್ರೆಸ್‌ಗೆ ಕೈ ಚಿಹ್ನೆ ಸಿಕ್ಕಿದ್ದು ಹೇಗೆ ?
ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಇಂದಿರಾ ಗಾಂಧಿ ಹಾಗೂ ಜಗಜೀವನ್ ರಾಮ್ ಅವರ ಕಾಂಗ್ರೆಸ್ಸಿನಲ್ಲಿ ಮತ್ತೊಂದು ಒಡಕು ಉಂಟಾಯಿತು. 1977ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಇಂದಿರಾ ಗಾಂಧಿ ಅವರನ್ನು ಸೋಲಿಸಿತು. ಇದಾದ ಬಳಿಕ ಕಾಂಗ್ರೆಸ್‌ನಲ್ಲಿ ಇಂದಿರಾ ವಿರುದ್ಧ ಮತ್ತೊಂದು ಬಣ ಎದ್ದಿತ್ತು. ಈ ಗುಂಪಿನ ನೇತೃತ್ವವನ್ನು ದೇವರಾಜ್ ಅರಸ್ ಮತ್ತು ಕೆ. ಬ್ರಹ್ಮಾನಂದ ರೆಡ್ಡಿ ವಹಿಸಿದ್ದರು.
1978ರಲ್ಲಿ ಇಂದಿರಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದರು. ಹಸು ಮತ್ತು ಕರುವಿನ ಚುನಾವಣಾ ಚಿಹ್ನೆಯನ್ನು ನೀಡಲು ಆಯೋಗ ನಿರಾಕರಿಸಿದ್ದರಿಂದ ಇಂದಿರಾ ಗಾಂಧಿ ಸುಪ್ರೀಂ ಮೊರೆ ಹೋಗಿದ್ದರು. ಆದರೆ ಕೋರ್ಟ್ ಕೂಡ ಇದರಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.
ಬಳಿಕ ಚುನಾವಣಾ ಆಯೋಗವು ಕಾಂಗ್ರೆಸ್ (ಐ) ಅನ್ನು ರಾಷ್ಟ್ರೀಯ ಪಕ್ಷವೆಂದು ಗುರುತಿಸಿ ಅದಕ್ಕೆ ಕೈ ಚುನಾವಣಾ ಚಿಹ್ನೆಯನ್ನು ನೀಡಿತು. ದೇವರಾಜ್ ಅರಸ್ ಮತ್ತು ಕೆ ಬ್ರಹ್ಮಾನಂದ ರೆಡ್ಡಿ ಅವರನ್ನೊಳಗೊಂಡ ಕಾಂಗ್ರೆಸ್ ಬಣಕ್ಕೆ ‘ಚರಕ’ ಚುನಾವಣಾ ಚಿಹ್ನೆಯನ್ನು ನೀಡಿತು.
ಬಿಜೆಪಿಗೆ ಕಮಲದ ಚಿಹ್ನೆ ಸಿಕ್ಕಿದ್ಹೇಗೆ ?
ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲು ಭಾರತೀಯ ಜನಸಂಘ (ಬಿಜೆಎಸ್) ಆಗಿತ್ತು. ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ದೀಪದ ಚಿಹ್ನೆ ನೀಡಲಾಗಿತ್ತು. 1951ರಿಂದ 1977ರವರೆಗೆ ಬಿಜೆಎಸ್‌ನ ಚುನಾವಣಾ ಚಿಹ್ನೆ ದೀಪವೇ ಇತ್ತು. ಆದರೆ 1977ರ ಚುನಾವಣೆಯಲ್ಲಿ ಬಿಜೆಎಸ್ ಅನೌಪಚಾರಿಕವಾಗಿ ಜನತಾ ಪಕ್ಷದೊಂದಿಗೆ ವಿಲೀನಗೊಂಡಿತು. ಈ ಸಮಯದಲ್ಲಿ ಜನತಾ ಪಕ್ಷದ ಚುನಾವಣಾ ಚಿಹ್ನೆ ‘ಹಲ್ಧರ್ ಕಿಸಾನ್’ ಆಗಿತ್ತು.
1977ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾಗಾಂಧಿ ಅವರನ್ನು ಸೋಲಿಸಿದ ನಂತರ ಜನತಾ ಪಕ್ಷದಲ್ಲಿಯೂ ಒಡಕು ಮೂಡಿತ್ತು. 1980ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ತಮ್ಮ ನಾಯಕ ಎಂದು ಘೋಷಿಸಲಾಯ್ತು. ಎರಡೂ ಗುಂಪುಗಳು ಹೆಸರಿಗಾಗಿ ಪೈಪೋಟಿಗಿಳಿದಿದ್ದವು.
24 ಏಪ್ರಿಲ್ 1980 ರಂದು ಚುನಾವಣಾ ಆಯೋಗ ಜನತಾ ಪಕ್ಷದ ಚುನಾವಣಾ ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಂಡಿತು. ವಾಜಪೇಯಿ ಅವರ ಬಣವಾದ ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಗುರುತಿಸಿತು. ಭಾರತೀಯ ಜನತಾ ಪಕ್ಷಕ್ಕೆ ಕಮಲದ ಹೂವನ್ನು ಚುನಾವಣಾ ಚಿಹ್ನೆಯಾಗಿ ನೀಡಿತ್ತು.