ಚಿಕ್ಕಮಗಳೂರು: ಹಿರೇಮಗಳೂರು ಕಣ್ಣನ್ ಅವರಿಗೆ ಮಂಜೂರಾದ ತಸ್ತೀಕ್ ಹಣಕ್ಕಿಂತ ಹೆಚ್ಚು ಪಾವತಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ನೋಟಿಸ್ ನೀಡಿ ಅವರಿಂದಲೇ ಹಣ ವಸೂಲಿ ಮಾಡುವಂತೆ ಮುಜರಾಯಿ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಕನ್ನಡದ ಪೂಜಾರಿ ಎಂದೇ ಖ್ಯಾತರಾದ ಹಿರೇಮಗಳೂರು ಕಣ್ಣನ್ ಅವರಿಗೆ ಹೆಚ್ಚುವರಿ ತಸ್ತೀಕ್ ಹಣ ಪಾವತಿಯಾದ ಬಗ್ಗೆ ನೋಟಿಸ್ ನೀಡಲಾಗಿದ್ದು, ಅದನ್ನು ಹಿಂಪಡೆಯುವಂತೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ತಪ್ಪಾಗಿ ಹಣ ಪಾವತಿಸಿದ ಅಂದಿನ ತಹಶೀಲ್ದಾರ್ ಮತ್ತು ಸಿಬ್ಬಂದಿ ವಿಚಾರಣೆ ನಡೆಸಿ ಅವರಿಂದಲೇ ಹಣ ವಸೂಲಿ ಮಾಡಬೇಕು. ಇದೇ ತಕ್ಕ ಶಿಕ್ಷೆ ಎಂದು ಹೇಳಿದ್ದಾರೆ. ಹಿರೇಮಗಳೂರು ಕೋದಂಡರಾಮ ದೇವಾಲಯದ ಪ್ರಧಾನ ಅರ್ಚಕ ಕಣ್ಣನ್ ಅವರಿಗೆ ಒಂಬತ್ತು ವರ್ಷಗಳಿಂದ ಹೆಚ್ಚುವರಿಯಾಗಿ ಪಾವತಿಯಾದ 4.74 ಲಕ್ಷ ರೂ. ಹಿಂತಿರುಗಿಸಬೇಕು ಎಂದು ಚಿಕ್ಕಮಗಳೂರು ತಹಶೀಲ್ದಾರ್ ಡಿಸೆಂಬರ್ 2ರಂದು ನೋಟಿಸ್ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.