ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಆಳಂದದಲ್ಲಿರುವ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆ ನೆರವೇರಿಸಲು ಕಲಬುರ್ಗಿ ವಕ್ಫ್ ಟ್ರಿಬ್ಯುನಲ್ ಕೋರ್ಟ್ ಅನುಮತಿ ನೀಡಿದೆ.
ಹಿಂದೂ ಮತ್ತು ಮುಸ್ಲಿಮರಿಗೆ ಧಾರ್ಮಿಕ ವಿಧಿ ವಿಧಾನ ನಡೆಸಲು ಪ್ರತ್ಯೇಕ ಸಮಯವನ್ನು ನಿಗದಿ ಮಾಡಲಾಗಿದೆ. ಫೆಬ್ರವರಿ 18 ರ ಶಿವರಾತ್ರಿ ದಿನ ಉರುಸ್ ಇರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮುಸ್ಲಿಮರಿಗೆ, ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಿಂದೂಗಳಿಗೆ ಶಿವಲಿಂಗ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ.
ಇದರೊಂದಿಗೆ ತಲಾ 15 ಮಂದಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಸ್ಥಳಕ್ಕೆ ಆಗಮಿಸಿದರೆ ಶಾಂತಿ ಭಂಗವಾಗುತ್ತದೆ. ಅವರಿಗೆ ಶಿವರಾತ್ರಿ ಪೂಜೆಗೆ ಅನುಮತಿ ನೀಡುವುದು ಬೇಡವೆಂದು ಅಲ್ಪಸಂಖ್ಯಾತ ಮುಖಂಡರು ವಕ್ಫ್ ಬೋರ್ಡ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ವಕ್ಪ್ ಟ್ರಿಬ್ಯುನಲ್ ಕೋರ್ಟ್ ಸೀಮಿತ ಜನರಿಗಷ್ಟೇ ಪೂಜೆಗೆ ಅನುಮತಿ ನೀಡಿದೆ.