ಕೆನಡಾದಲ್ಲಿ ಮತ್ತೊಂದು ಹಿಂದೂ ದೇವಾಲಯಕ್ಕೆ ಹಾನಿ ಮಾಡಲಾಗಿದ್ದು, ಭಾರತ ಹಾಗೂ ಮೋದಿ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಕೆನಡಾದ ಒಂಟೋರಿಯಾದಲ್ಲಿರುವ ದೇವಾಲಯಕ್ಕೆ ಹಾನಿ ಮಾಡಲಾಗಿದ್ದು, ನಾಲ್ಕು ತಿಂಗಳ ಅವಧಿಯಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ.
ಈ ಮೊದಲು ಜನವರಿ 31ರಂದು ಕೆನಡಾದ ಬ್ರಾಂಪ್ಟನ್ ನಲ್ಲಿರುವ ಹಿಂದೂ ದೇವಾಲಯಕ್ಕೆ ಇದೇ ರೀತಿ ಹಾನಿ ಮಾಡಲಾಗಿತ್ತು. ಈಗ ಒಂಟೋರಿಯಾದಲ್ಲಿರುವ ದೇವಾಲಯದಲ್ಲಿ ಸ್ಪ್ರೇ ಪೇಯಿಂಟ್ ಮಾಡಿರುವ ದುಷ್ಕರ್ಮಿಗಳು, ಹೊರಗೆ ‘ಹಿಂದುಸ್ತಾನ್ ಮುರ್ದಾಬಾದ್’ ಹಾಗೂ ಮೋದಿಯವರನ್ನು ಭಯೋತ್ಪಾದಕ ಎಂದು ಘೋಷಿಸಿ ಎಂಬ ಬರಹ ಬರೆದಿದ್ದಾರೆ.
ಬುಧವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸಿಸಿ ಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿರುವ ವಿಂಡ್ಸರ್ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ವಿವರಗಳನ್ನು ಬಿಡುಗಡೆ ಮಾಡಿ ಆರೋಪಿಗಳ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.