ಮಥುರಾ: ಬಾಬ್ರಿ ಧ್ವಂಸದ ವಾರ್ಷಿಕೋತ್ಸವದ ದಿನವಾದ ಡಿಸೆಂಬರ್ 6 ರಂದು ಮಥುರಾದಲ್ಲಿ ಹನುಮಾನ್ ಚಾಲೀಸಾ ಪಠಣದ ಪ್ರಯತ್ನ ನಡೆದಿದೆ.
ಮಂಗಳವಾರ ಶಾಹಿ ಈದ್ಗಾ ಮಸೀದಿಯೊಳಗೆ ಹನುಮಾನ್ ಚಾಲೀಸಾ ಪಠಿಸಲು ಮುಂದಾದ ಅಖಿಲ ಭಾರತ ಹಿಂದೂ ಮಹಾಸಭಾದ ಏಳೆಂಟು ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.
30 ವರ್ಷಗಳ ಹಿಂದೆ ಇದೇ ದಿನ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ರಚನೆಯನ್ನು ಕೆಡವಲಾಗಿತ್ತು. ಅದರ ಆಚರಣೆಯನ್ನು ಮಾಡಲು ಅಖಿಲ ಭಾರತ ಹಿಂದೂ ಮಹಾಸಭಾ ಮುಂದಾಗಿತ್ತು.
ಶ್ರೀ ಕೃಷ್ಣ ಜನ್ಮಭೂಮಿಯ ಮೂಲ ಗರ್ಭಗುಡಿಯಲ್ಲಿ ಹನುಮಾನ್ ಚಾಲೀಸಾವನ್ನು ಓದಲಾಗುವುದು ಎಂದು ಮಹಾಸಭಾ ಹೇಳಿತ್ತು. ಹಿಂದು ಮಹಾಸಭಾ ಈ ಘೋಷಣೆ ಮಾಡಿದ ಬೆನ್ನಲ್ಲಿಯೇ ಪೊಲೀಸರು ಮಸೀದಿಗೆ ತೆರಳುವ ಮಾರ್ಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಶಾಹಿ ಮಸೀದಿ ಮಾರ್ಗದ ಕಡೆಗೆ ತೆರಳುವ ಪ್ರತಿ ವಾಹನಗಳ ತಪಾಸಣೆ ಮಾಡಿದರು.
ಶಾಹಿ ಈದ್ಗಾದಲ್ಲಿ ಲಡ್ಡು ಗೋಪಾಲನ ಜಲಾಭಿಷೇಕ ಹಾಗೂ ರುದ್ರಾಭಿಷೇಕ ಮಾಡಲು ಬರುತ್ತಿದ್ದ ಹಿಂದೂ ಮಹಾಸಭಾ ಕಾರ್ಯಕರ್ತ ಸೌರಭ್ ಶರ್ಮಾ ಅವರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ನಗರಾದ್ಯಂತ ಕೆಲ ಕಾರ್ಯಕರ್ತರ ಬಂಧನ ಮಾಡಲಾಗಿದೆ.
ಈ ನಡುವೆ ರಾಷ್ಟ್ರೀಯ ಖಜಾಂಚಿ ದಿನೇಶ್ ಶರ್ಮಾ ವಿಡಿಯೋ ಬಿಡುಗಡೆ ಮಾಡಿದ್ದು, ಹಾಗೇನಾದರೂ ಶಾಹಿ ಈದ್ಗಾ ಮಸೀದಿಯಲ್ಲಿ ಹನುಮಾನ್ ಚಾಲೀಸಾ ಓದುವ ತಮ್ಮ ಪ್ರಯತ್ನವನ್ನು ತಡೆದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.