ಮಂಗಳೂರು: ಮಂಗಳೂರಿನಲ್ಲಿ ಹೋಂ ಸ್ಟೇ ಮೇಲೆ ದಾಳಿ ಪ್ರಕರಣದ ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ 44 ಆರೋಪಿಗಳ ಪೈಕಿ ಮೂವರು ಮೃತಪಟ್ಟಿದ್ದರು. ಓರ್ವ ಪತ್ರಕರ್ತನನ್ನು ನ್ಯಾಯಾಲಯ ಪ್ರಕರಣದಿಂದ ಕೈಬಿಟ್ಟಿತ್ತು. ಉಳಿದ 40 ಆರೋಪಿಗಳನ್ನು ಕೋರ್ಟ್ ದೋಷ ಮುಕ್ತಗೊಳಿಸಿದೆ.
2012ರ ಜುಲೈ 28ರಂದು ಮಂಗಳೂರಿನ ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಯಲ್ಲಿ ಬರ್ತಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕರು, ಯುವತಿಯರ ಮೇಲೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದರು.
ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು 44 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದು, ಪ್ರಕರಣ ಸಂಬಂಧ ಇಬ್ಬರು ಪತ್ರಕರ್ತರನ್ನು ಬಂಧಿಸಲಾಗಿತ್ತು. ಒಬ್ಬ ಪತ್ರಕರ್ತನ ವಿರುದ್ಧದ ಕೇಸ್ ಅನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿತ್ತು. ಮಂಗಳೂರು ಕೋರ್ಟ್ 2018 ರಲ್ಲಿ ಪತ್ರಕರ್ತನನ್ನು ಕೇಸ್ ನಿಂದ ಖುಲಾಸೆಗೊಳಿಸಿತ್ತು. ಕೋರ್ಟ್ ಸಾಕ್ಷ್ಯಾಧಾರದ ಕೊರತೆಯಿಂದ 40 ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.