
ಕೇಂದ್ರ ಬಿಜೆಪಿ ಸರ್ಕಾರ ತನ್ನ ಚಾಳಿ ಮುಂದುವರಿಸಿದೆ. ಇಡೀ ಭಾರತವನ್ನು ಹಿಡೆನ್ ಅಜೆಂಡಾ ಮೂಲಕ ಹಿಡಿದಿಟ್ಟುಕೊಳ್ಳುವ ಕಪಟಯತ್ನ ಮಾಡುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ, ಹಿಂದಿ ಹೇರಿಕೆ ಬಗ್ಗೆ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿ ಆಘಾತಕಾರಿ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ವಿನಾಶಕ್ಕೆ ದಾರಿಯಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿಯ ಶಿಫಾರಸುಗಳನ್ನು ಓದಿ ನನಗೆ ದೊಡ್ಡವೇ ಆಯಿತು. ಸರ್ವಾಧಿಕಾರಿ ಮನಃಸ್ಥಿತಿಯಿಂದ ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಹೊಸಕಿ ಹಾಕಿ ಇಡೀ ದೇಶದ ಮೇಲೆ ಹಿಂದಿ ಹೇರಿ ಬಹುತ್ವದ ಭಾರತವನ್ನು ‘ಹಿಂದಿಸ್ತಾನ್’ ಮಾಡುವ ಹುನ್ನಾರ ಇದರ ಹಿಂದಿದೆ.
ವರದಿಯಲ್ಲಿರುವ ಅನೇಕ ಶಿಫಾರಸುಗಳು ಭಾರತೀಯ ಒಕ್ಕೂಟ ವ್ಯವಸ್ಥೆ ಸೀಳಿ, ಛಿದ್ರ ಮಾಡುವಂತಿವೆ. ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎಂಬ ವಿಚ್ಛಿದ್ರಕಾರಿ ನೀತಿಯ ಮೂಲಕ ಒಕ್ಕೂಟ ವ್ಯವಸ್ಥೆ ನಿರ್ನಾಮ ಮಾಡುವುದೇ ಅಮಿತಾ ಶಾ ಸಮಿತಿಯ ಅಮಿತೋದ್ದೇಶ ಎಂದು ಟೀಕಿಸಿದ್ದಾರೆ.
ಏಕಭಾಷೆಯ ಅಧಿಪತ್ಯವನ್ನು ಭಾರತ ಒಪ್ಪುವುದಿಲ್ಲ. ಬಹುತ್ವ ನೀತಿಯಲ್ಲಿ ಏಕತೆಯ ಮೂಲಕ ಅಖಂಡವಾಗಿರುವ ಭಾರತವನ್ನು ಒಡೆದು ಆಳುವ ರಾಷ್ಟ್ರದ ಒಡಕಿಗೆ ಕಾರಣವೂ ಆಗಬಹುದು. ಕೇಂದ್ರ ಸರ್ಕಾರ ಕೂಡಲೇ ಈ ವರದಿಯನ್ನು ಹಿಂಪಡೆಯಬೇಕು, ಎಲ್ಲ ಭಾಷೆಗಳನ್ನು ಸಮಾನವಾಗಿ ನೋಡುವ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಿರಿ ಎಂದು ಒತ್ತಾಯಿಸಿದ್ದಾರೆ.
ಹಿಂದಿ ಪ್ರದೇಶಗಳಲ್ಲಿಯೂ ಹಿಂದಿ ಮಾತನಾಡುವವರ ಸಂಖ್ಯೆ ಕಡಿಮೆ ಇದೆ. ಹಿಂದಿಗಿಂತ ಇತರ ಭಾಷೆಗಳಲ್ಲಿ ಮಾತನಾಡುವ ಜನರೇ ದೇಶದಲ್ಲಿ ಹೆಚ್ಚಿದ್ದಾರೆ. ಸತ್ಯಸ್ಥಿತಿ ಹೀಗಿದ್ದರೂ ಬಿಜೆಪಿ ಹಿಂದಿ ಹೇರಿಕೆ ಮಾಡುತ್ತಿದೆ. ತ್ರಿಭಾಷಾ ಸೂತ್ರಕ್ಕೆ ತಿಲಾಂಜಲಿ ನೀಡುವ ಹುನ್ನಾರ ಇದು. ಆರ್ಯ ಸಂಸ್ಕೃತಿಯ ತುಷ್ಟೀಕರಣವನ್ನು ಸಹಿಸುವ ಪ್ರಶ್ನೆ ಇಲ್ಲ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಭಾರತದಲ್ಲಿ ಆಟ ನಡೆಯುವುದಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಅಡ್ಡದಾರಿಯಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಿತು. ಅದರ ಪರಿಣಾಮ ಹೆಜ್ಜೆಹೆಜ್ಜೆಗೂ ಕನ್ನಡಕ್ಕೆ ಕಂಟಕ ಎದುರಾಯಿತು. ಈಗ ಕನ್ನಡ ಸೇರಿ ತೆಲುಗು, ತಮಿಳು, ಮಲೆಯಾಳಂ, ಮರಾಠಿ, ಒರಿಯಾ ಸೇರಿ ಎಲ್ಲ ಅನ್ಯಭಾಷೆಗಳ ಅವಸಾನಕ್ಕೆ ಕೇಂದ್ರ ಸರ್ಕಾರ ಮಹೂರ್ತ ಇಟ್ಟಿದೆ ಎಂದು ದೂರಿದ್ದಾರೆ.
ಯಾವುದೇ ಕಾರಣಕ್ಕೂ ಈ ವರದಿಯ ಶಿಫಾರಸುಗಳ ಜಾರಿಗೆ ಅವಕಾಶ ನೀಡಬಾರದು. ಎಲ್ಲ ರಾಜ್ಯಗಳೂ, ದಕ್ಷಿಣದ ರಾಜ್ಯಗಳು ಒಗ್ಗಟ್ಟಾಗಿ ವಿರೋಧಿಸಬೇಕು. ಎಲ್ಲರಲ್ಲಿ ಒಂದಷ್ಟೇ ಆಗಿರುವ ಹಿಂದಿಯ ಭಾಷೆ ಹೇರಿಕೆ ಎಂದರೆ, ಒಕ್ಕೂಟ ವ್ಯವಸ್ಥೆಗೆ ಹೆಡೆಮುರಿ ಕಟ್ಟುವ ದುಸ್ಸಾಹಸ ಎಂದು ಭಾವಿಸಲಾಗಿದೆ ಎಂದು ಹೇಳಿದ್ದಾರೆ.
ಬಾಯಿಮಾತಿನಲ್ಲಿ ಸ್ಥಳೀಯ ಭಾಷೆಯ ಜಪ ಮಾಡುವ ಬಿಜೆಪಿ, ಆಂತರ್ಯದಲ್ಲಿ ಹಿಂದಿಯನ್ನೇ ಹೇರುತ್ತಿದೆ, ಇದು ಸತ್ಯ. ಕೂಡಲೇ ಕೇಂದ್ರದ ಬಿಜೆಪಿ ಸರ್ಕಾರ ಈ ವರದಿಯನ್ನು ವಾಪಸ್ ಪಡೆಯಬೇಕು. ಸರ್ವ ಭಾಷೆಗಳಿಗೆ ಸಮಾನವಾದ ನೀತಿಗೆ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ.
ಐಐಐಟಿ, ಐಐಎಂ, ಏಮ್ಸ್, ಕೇಂದ್ರೀಯ – ನವೋದಯ ವಿದ್ಯಾಲಯಗಳಲ್ಲಿ ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿ ಬೋಧನೆ ಮಾಡುವ ವರದಿ, ಅದೇ ಸ್ಥಳೀಯ ಭಾಷೆಯ ಸಂಹಾರಕ್ಕೆ ಅನೇಕ ಆಯುಧಗಳನ್ನು ಒಳಗೊಳ್ಳಲು ಸನ್ನದ್ಧವಾಗಿದೆ. ಹೀಗಾಗಿ ಪ್ರಾದೇಶಿಕ ಭಾಷೆಯ ಬಗ್ಗೆ ಬಿಜೆಪಿ ಎಷ್ಟು ಬೊಬ್ಬೆ ಹಾಕಿದರೂ ನಂಬುವ ಸ್ಥಿತಿ ಇಲ್ಲ ಎಂದಿದ್ದಾರೆ.
ಸ್ಥಳೀಯ ಭಾಷೆಯ ಉದ್ಧಾರದ ನೆಪ ಹೇಳುತ್ತಾ ವಾಮಮಾರ್ಗದಲ್ಲಿ ಇಡೀ ದೇಶದ ಮೇಲೆ ಹಿಂದಿ ಹೇರಿಕೆ ಮಾಡುವುದೇ ಕೇಂದ್ರದ ದುರುದ್ದೇಶ ಸ್ಪಷ್ಟವಾಗಿದೆ. ಕನ್ನಡದ ಮೇಲೆ ಈವರೆಗೂ ಕೇಂದ್ರ ಸರ್ಕಾರ ನಡೆಸಿರುವ ದಬ್ಬಾಳಿಕೆಯೇ ಇದಕ್ಕೆ ಸಾಕ್ಷಿ. ಬಹುಮತ ಇದೆ ಎನ್ನವ ಕಾರಣಕ್ಕೆ ಹಿಂದಿ ಹೇರಿಕೆ ರಾಜಕೀಯ ಮಾಡಿದರೆ ಭಾರತವು ಭಾಷಾ ದಳ್ಳುರಿಯಲ್ಲಿ ಬರುವುದು ಖಚಿತ. ಬಾರತ ಎಂದರೆ ಹಿಂದು, ಹಿಂದಿ ಅಷ್ಟೇ ಅಲ್ಲ. ಭಾರತ ನಮ್ಮೆಲ್ಲರದು. ಹಿಂದಿ ಹೇರಿಕೆ ನಿಲ್ಲಲಿ ಎಂದು ಟ್ವೀಟ್ ಮಾಡಿದ್ದಾರೆ.