ನವದೆಹಲಿ: ಭಾರತೀಯ ಷೇರು ಮಾರುಕಟ್ಟೆ ಅಪಾಯದಲ್ಲಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
ಷೇರು ಮಾರುಕಟ್ಟೆಯ ಮೇಲೆ ನಿಗಾ ವಹಿಸುವ ಸೆಬಿ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. ಲೋಕಸಭೆ ವಿಪಕ್ಷ ನಾಯಕನಾಗಿ ಇದನ್ನು ಹೇಳುವುದು, ನಿಮ್ಮ ಗಮನಕ್ಕೆ ತರುವುದು ನನ್ನ ಕರ್ತವ್ಯವಾಗಿದೆ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಕಾನೂನುಬಾಹಿರವಾಗಿ ಷೇರು ಹೊಂದಿರುವ ಬಗ್ಗೆ ಅದಾನಿ ಸಮೂಹದ ಮೇಲೆ ಗಂಭೀರ ಆರೋಪಗಳಿವೆ. ಆ ಫಂಡ್ ಗಳಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬಿಚ್ ಹಾಗೂ ಆಕೆಯ ಪತಿಗೆ ಸಂಬಂಧ ಇರುವ ಬಗ್ಗೆ ಆರೋಪ ಕೇಳಿ ಬಂದಿದೆ. ಕ್ರಿಕೆಟ್ ಮ್ಯಾಚ್ ನಲ್ಲಿ ಅಂಪೈರ್ ಹೊಂದಾಣಿಕೆ ಮಾಡಿಕೊಂಡಂತಾಗಿದೆ ಎಂದು ಟೀಕಿಸಿದ್ದಾರೆ.
ಸೆಬಿ ಅಧ್ಯಕ್ಷರ ವಿರುದ್ಧ ಮಾಡಿರುವ ಆರೋಪಗಳು ಸೆಬಿಯ ಸಮಗ್ರತೆಗೆ ತೀವ್ರ ಧಕ್ಕೆ ತಂದಿವೆ. ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಮತ್ತೊಮ್ಮೆ ತನಿಖೆ ನಡೆಸುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಮಾರುಕಟ್ಟೆ ನಿಯಂತ್ರಕ ಸೆಬಿಯ ಅಧ್ಯಕ್ಷರಾದ ಮಾಧವಿ ಬುಚ್ ಮತ್ತು ಅವರ ಪತಿ ಅದಾನಿ ಹಣ-ಹೀರುವ ಹಗರಣದಲ್ಲಿ ಬಳಸಲಾದ ಗುರುತಿಸಲಾಗದ ಕಡಲಾಚೆಯ ನಿಧಿಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಪ್ರತಿಪಾದಿಸಿದ ನಂತರ ರಾಹುಲ್ ಗಾಂಧಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಸಣ್ಣ ಚಿಲ್ಲರೆ ಹೂಡಿಕೆದಾರರ ಸಂಪತ್ತನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿರುವ ಸೆಬಿಯ ಅಧ್ಯಕ್ಷರ ವಿರುದ್ಧದ ಆರೋಪಗಳಿವೆ. SEBI ಅಧ್ಯಕ್ಷೆ ಮಾಧಬಿ ಪುರಿ ಬುಚ್ ಇನ್ನೂ ಏಕೆ ರಾಜೀನಾಮೆ ನೀಡಿಲ್ಲ? ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡರೆ, ಯಾರು ಹೊಣೆಗಾರರಾಗುತ್ತಾರೆ? ಪ್ರಧಾನಿ ಮೋದಿ, ಸೆಬಿ ಅಧ್ಯಕ್ಷರೇ ಅಥವಾ ಗೌತಮ್ ಅದಾನಿ ಅವರೇ ಎಂದು ಪ್ರಶ್ನಿಸಿದ್ದಾರೆ.