ಅದಾನಿ ಸಮೂಹದ ಕಂಪನಿಗಳ ಕುರಿತಂತೆ ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ಬಿಡುಗಡೆ ಮಾಡಿರುವ ವರದಿ ಭಾರತದಲ್ಲಿ ತಲ್ಲಣವನ್ನುಂಟು ಮಾಡಿರುವ ಮಧ್ಯೆ ಭಾನುವಾರದಂದು ಅದಾನಿ ಸಮೂಹ ಹಿಂಡನ್ ಬರ್ಗ್ ನ 106 ಪುಟಗಳ ವರದಿಗೆ ಪ್ರತಿಯಾಗಿ 413 ಪುಟಗಳ ಪ್ರತಿಕ್ರಿಯೆಯನ್ನು ಬಿಡುಗಡೆ ಮಾಡಿದೆ.
ಅದಾನಿ ಸಮೂಹ ಬಿಡುಗಡೆ ಮಾಡಿರುವ ಪ್ರತಿಕ್ರಿಯೆಯಲ್ಲಿ, ಹಿಂಡನ್ ಬರ್ಗ್ ವರದಿ ಆಧಾರ ರಹಿತವಾಗಿ ಯಾವುದೇ ಪುರಾವೆ ಇಲ್ಲದೆ ಮಾಡಿರುವ ಆರೋಪ ಎಂದು ಸ್ಪಷ್ಟವಾಗಿ ಹೇಳಿದ್ದು, ಅಭಿವೃದ್ಧಿ ಹೊಂದುತ್ತಿರುವ ಭಾರತದ ಮೇಲೆ ನಡೆಸಿದ ವ್ಯವಸ್ಥಿತ ದಾಳಿ ಎಂದು ಬಣ್ಣಿಸಲಾಗಿದೆ.
ಅದಾನಿ ಸಮೂಹದ ಕಂಪನಿಗಳು, ಭಾರತದ ನೆಲದ ಕಾನೂನಿನಂತೆ ಎಲ್ಲ ನೀತಿ ನಿಯಮಗಳನ್ನು ಅನುಸರಿಸಿಕೊಂಡು ಬಂದಿದ್ದು, ಯಾವುದೇ ಲೋಪದೋಷಗಳಾಗಿಲ್ಲ. ಶಾರ್ಟ್ ಸೆಲ್ಲರ್ ಆಗಿರುವ ಹಿಂಡನ್ ಬರ್ಗ್ ವಾಮ ಮಾರ್ಗದ ಮೂಲಕ ಲಾಭ ಮಾಡಿಕೊಳ್ಳಲು ಇಂತಹದೊಂದು ದುರುದ್ದೇಶಪೂರಿತ ವರದಿಯನ್ನು ಬಿಡುಗಡೆ ಮಾಡಿದೆ ಎಂದು ಆರೋಪಿಸಲಾಗಿದೆ.