ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು ಎಂಬ ಗಾದೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆಹಾರವಾಗಿದ್ದಾರೆ.
ಬಿಸ್ವಾ ಅವರು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಗೃಹಮಂತ್ರಿ ಎಂದು ಹೇಳುವ ಬದಲಿಗೆ ಪ್ರಧಾನ ಮಂತ್ರಿ ಎಂದು ಹೇಳುವ ಮೂಲಕ ಆಡಳಿತಾರೂಢ ಬಿಜೆಪಿಗೆ ಮುಜುಗರವನ್ನುಂಟು ಮಾಡಿದ್ದಾರೆ, ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ಟೀಕೆಗೆ ಆಹಾರವನ್ನು ಒದಗಿಸಿಕೊಟ್ಟಿದ್ದಾರೆ.
ಅಸ್ಸಾಂನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರು ಪಾಲ್ಗೊಂಡಿದ್ದರು. ಈ ವೇಳೆ ಭಾಷಣ ಮಾಡುವಾಗ ಬಿಸ್ವಾ ಅವರು ವೇದಿಕೆಯ ಮೇಲಿದ್ದ ಗಣ್ಯರ ಬಗ್ಗೆ ಮಾತನಾಡುತ್ತಾ ಅಮಿತ್ ಶಾ ಅವರಿಗೆ ಬಾಯ್ತಪ್ಪಿ ನಮ್ಮ ನೆಚ್ಚಿನ ಪ್ರಧಾನಮಂತ್ರಿ ಅಮಿತ್ ಶಾ, ಗೃಹ ಮಂತ್ರಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರ ಮಾರ್ಗದರ್ಶನದಲ್ಲಿ ದೇಶ ಪ್ರಗತಿಯತ್ತ ಸಾಗಿದೆ ಎಂದು ಹೇಳಿಬಿಟ್ಟರು.
BIG NEWS: ಮಕ್ಕಳಲ್ಲಿ ಟೊಮೆಟೊ ಜ್ವರ ಭೀತಿ; ಎಚ್ಚರ ವಹಿಸುವಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಸೂಚನೆ
ಆಗ ಎಲ್ಲರೂ ಅರೆಕ್ಷಣ ಅವಾಕ್ಕಾದರು. ಕೂಡಲೇ ತಪ್ಪಿನ ಅರಿವಾಗಿ ಬಿಸ್ವಾ ನಮ್ಮೆಲ್ಲಾ ನೆಚ್ಚಿನ ಗೃಹ ಮಂತ್ರಿ ಅಮಿತ್ ಶಾ ಎಂದು ತಿದ್ದಿಕೊಂಡರು.
ಈ ಬಗ್ಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಟೀಕೆ –ಟಿಪ್ಪಣಿಗಳು ವ್ಯಕ್ತವಾಗತೊಡಗಿವೆ. ಇದನ್ನು ಪ್ರತಿಪಕ್ಷ ಕಾಂಗ್ರೆಸ್ ತನ್ನ ಟೀಕೆಗೆ ಆಹಾರ ಮಾಡಿಕೊಂಡಿದ್ದರೆ, ಬಾಯ್ತಪ್ಪಿನಿಂದ ಹೀಗೆ ಸಂಬೋಧಿಸಿದ್ದಾರೆ. ಇದೊಂದು ಮಾನವ ಸಹಜ ತಪ್ಪಷ್ಟೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.
ಅವರು ನೀಡಿದ ಈ ಹೇಳಿಕೆಯ 15 ಸೆಕೆಂಡುಗಳ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿರುವ ಅಸ್ಸಾಂನ ಪ್ರತಿಪಕ್ಷಗಳು ಬಿಜೆಪಿ ಇಬ್ಬರು ಉನ್ನತ ನಾಯಕರ ಹುದ್ದೆಗಳನ್ನು ಅದಲುಬದಲು ಮಾಡಿರುವುದರ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಲಾರಂಭಿಸಿವೆ.
ಈ ಹಿಂದೆ ಸರ್ಬಾನಂದ ಸೋನ್ವಾಲ್ ಮುಖ್ಯಮಂತ್ರಿಯಾಗಿದ್ದಾಗ ಮಂತ್ರಿಯಾಗಿದ್ದ ಹಿಮಂತ್ ಬಿಸ್ವಾ ಅವರನ್ನು ಮುಖ್ಯಮಂತ್ರಿ ಎಂದು ಹಲವು ಬಾರಿ ಸಂಬೋಧಿಸಲಾಗಿತ್ತು. ಹೀಗಾಗಿ ಭಾರತದ ಪ್ರಧಾನಮಂತ್ರಿಯನ್ನು ಬದಲಾವಣೆ ಮಾಡಲು ಬಿಜೆಪಿ ನಿರ್ಧರಿಸಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿ ಟ್ವೀಟ್ ಮಾಡಿದೆ.