ಗುವಾಹಟಿ: ಅಸ್ಸಾಂ ನೂತನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ ನೂತನ ನಾಯಕನಾಗಿ ಹಿಮಂತ ಬಿಸ್ವ ಅವರನ್ನು ಆಯ್ಕೆ ಮಾಡಲಾಗಿದ್ದು, ಇವತ್ತು ಸಂಜೆ 4 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.
ಸಿಎಂ ಹುದ್ದೆಗಾಗಿ ಸರ್ಬಾನಂದ ಸೋನೋವಾಲ್ ಮತ್ತು ಹಿಮಂತ ಬಿಸ್ವ ಅವರ ನಡುವೆ ತೀವ್ರ ಪೈಪೋಟಿ ಇತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ನಿನ್ನೆ ದೆಹಲಿಯಲ್ಲಿ ಭೇಟಿ ಮಾಡಿ ಉಭಯ ನಾಯಕರು ಮಾತುಕತೆ ನಡೆಸಿದ್ದರು.
ಇಂದು ಗುವಾಹಟಿಯಲ್ಲಿ ಶಾಸಕಾಂಗ ಸಭೆ ನಡೆದಿದ್ದು, ಹಿಮಂತ ಬಿಸ್ವ ಅವರನ್ನು ಶಾಸಕಾಂಗ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಈ ಬಾರಿ ಚುನಾವಣೆಗೆ ಮೊದಲು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. 2016 ರಲ್ಲಿ ಸರ್ಬಾನಂದ ಸೋನೋವಾಲ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿ ಅಧಿಕಾರಕ್ಕೆ ಬಂದಿತ್ತು.
126 ಸದಸ್ಯ ಬಲ ಹೊಂದಿರುವ ಆಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ 60, ಮಿತ್ರಪಕ್ಷಗಳಾದ ಎಜಿಪಿ 9, ಯುಪಿಪಿಎಲ್ 6 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ. ಸಿಎಂ ಸ್ಥಾನಕ್ಕೆ ಸರ್ಬಾನಂದ ಸೋನಾವಾಲ್ ರಾಜೀನಾಮೆ ಸಲ್ಲಿಸಿದ್ದಾರೆ.