ಶಿಮ್ಲಾ: ಹಿಮಾಚಲ ಪ್ರದೆಶದಲ್ಲಿ ವರುಣಾರ್ಭಟಕ್ಕೆ ಬಲಿಯಾದವರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಶಿಮ್ಲಾದ ಶಿವ ದೇವಾಲಯದ ಬಳಿ ಸಂಭವಿಸಿದ ಭೂಕುಸಿತದಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮತ್ತಷ್ಟು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಮುಂಗಾರು ಆರಂಭವಾದ 55 ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಬರೋಬ್ಬರಿ 113 ಕಡೆ ಭೂಕುಸಿತ ಸಂಭವಿಸಿದ್ದು, ಲೋಕೋಪಯೋಗಿ ಇಲಾಖೆಗೆ 2,491 ಕೋಟಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 1,000 ಕೋಟಿ ನಷ್ಟವಾಗಿದೆ.
ಶಿಮ್ಲಾದ ಸಮ್ಮರ್ ಹಿಲ್, ಫಾಗಲಿ, ಕೃಷ್ಣಾ ನಗರದಲ್ಲಿ ಭೂಕುಸಿತದಲ್ಲಿ ಈವರೆಗೆ ಒಟ್ಟು 21 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಗಾಂಧಿ ಮಾಹಿತಿ ನೀಡಿದ್ದಾರೆ.
ಈಗಾಗಲೇ ಭುಕುಸಿತದಿಂದಾಗಿ ಹಲವು ಕಟ್ಟಡಗಳು, ರಸ್ತೆಗಳು, ಸೇತುವೆಗಳು ಸಂಪೂರ್ಣ ನಾಮಾವಶೇಷವಾಗಿದ್ದು, ಇನ್ನಷ್ಟು ಭೂಕುಸಿತವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಶಿಮ್ಲಾದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ.