ಶಿಮ್ಲಾ: ಆಹಾರ ಮಳಿಗೆಗಳ ಎದುರು ಮಾಲೀಕರ ಹೆಸರು ವ್ಯವಸ್ಥಾಪಕರ ವಿವರಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಇದರ ಬೆನ್ನಿಗೆ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಕೂಡ ಇದೆ ಹಾದಿಯನ್ನು ಹಿಡಿದಿದೆ. ಹಿಮಾಚಲ ಪ್ರದೇಶದ ಎಲ್ಲಾ ಆಹಾರ ಮಾರಾಟ ಮಳಿಗೆಗಳ ನಿರ್ವಾಹಕರು, ಮಾಲೀಕರು, ವ್ಯವಸ್ಥಾಪಕರ ವಿವರಗಳನ್ನು ಪ್ರದರ್ಶನ ಮಾಡುವಂತೆ ಹಿಮಾಚಲ ಪ್ರದೇಶದ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ತಿಳಿಸಿದ್ದಾರೆ.
ನಗರಾಭಿವೃದ್ಧಿ, ಪೌರಾಡಳಿತ ಇಲಾಖೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಅವರು, ರಾಜ್ಯದಾದ್ಯಂತ ಮಾರಾಟವಾಗುವ ಆಹಾರ ಖಾದ್ಯಗಳ ಗುಣಮಟ್ಟ ಕಾಪಾಡುವುದು, ಆಹಾರ ತಯಾರಿಕೆ ನಂತರ ಗ್ರಾಹಕರು ಸೇವಿಸಿದಾಗ ಸಮಸ್ಯೆ ಎದುರಾದಲ್ಲಿ ದೂರು ನೀಡಲು ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಸ್ತೆ ಬದಿ ವ್ಯಾಪಾರಿಗಳು ಕೂಡ ತಮ್ಮ ಮಾಹಿತಿಗಳನ್ನು ಕಡ್ಡಾಯವಾಗಿ ಬಿತ್ತರಿಸಬೇಕು. ಗ್ರಾಹಕರು ತಾವು ಸೇವಿಸುತ್ತಿರುವ ಆಹಾರ ತಯಾರಿಕೆ ಮತ್ತು ಮಾರಾಟ ಮಾಡಿದವರ ಕುರಿತು ಮಾಹಿತಿ ತಿಳಿಯುವಂತಿರಬೇಕು ಎಂದು ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.