ಮಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮೂರು-ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ, ಗುಡ್ಡ ಕುಸಿತ ಸಂಭವಿಸಿದೆ. ಜನರು ದಿನವೂ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಭಾರಿ ಮಳೆಯಿಂದಾಗಿ ಮಂಗಳೂರಿನಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಮಣ್ಣಿನಲ್ಲಿ ಸಿಲುಕಿದ್ದ ನಾಲ್ವರ ಪೈಕಿ ಮೂವರು ಮೃತಪಟ್ಟಿದ್ದಾರೆ. ಮೂವರೂ ಕೇರಳ ಮೂಲದ ಕಾರ್ಮಿಕರೆಂದು ತಿಳಿದುಬಂದಿದೆ.
ಏಕಾಏಕಿ ಮನೆಯ ಮೇಲೆ ಗುಡ್ಡ ಕುಸಿದು, ಮನೆ ಸಂಪೂರ್ಣ ನೆಲಸಮವಾಗಿದೆ. ಮಣ್ಣಿನಡಿ ಸಿಲುಕಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಇನ್ನೊಂದೆಡೆ ಶಿವಮೊಗ್ಗ ಜಿಲ್ಲೆಯಲ್ಲಿಯೂ ಭಾರಿ ಮಳೆಯಿಂದಾಗಿ ಮನೆ ಕುಸಿದು ಬಿದ್ದಿದೆ. ಅಮೀರ್ ಅಹ್ಮದ್ ಕಾಲೋನಿಯಲ್ಲಿ ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಧರಾಶಾಹಿಯಾಗಿದ್ದು, ಕುಟುಂಬದವರು ಕಣ್ಣೀರಿಡುತ್ತಿದ್ದಾರೆ. ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.